ಮುಂಬೈ : ಮಹಾರಾಷ್ಟ್ರದ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪನ್ವೇಲ್ ತಾಲ್ಲೂಕಿನ ಪಾತಾಳಗಂಗಾ ನದಿ ತೀರದಲ್ಲಿ ಅಪರೂಪದ ಘಟನೆ ನಡೆದಿದೆ. ಎಚ್‌ಪಿಸಿಎಲ್ (HPCL) ಸಂಸ್ಥೆಯ ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಸುಮಾರು 3,000 ತುಂಬಿದ ಹಾಗೂ ಖಾಲಿ ಗ್ಯಾಸ್ ಸಿಲಿಂಡರ್‌ಗಳು ಪ್ರವಾಹದ ನೀರಿಗೆ ಕೊಚ್ಚಿಹೋಗಿವೆ.
ಪ್ರವಾಹದ ನೀರಿನಲ್ಲಿ ನೂರಾರು ಸಿಲಿಂಡರ್‌ಗಳು ತೇಲಿಬರುತ್ತಿರುವುದನ್ನು ಕಂಡ ಸ್ಥಳೀಯರು ಅವುಗಳನ್ನು ದಡಕ್ಕೆ ಎಳೆದುಕೊಳ್ಳಲು ಮುಗಿಬಿದ್ದಿದ್ದಾರೆ. ಉಚಿತವಾಗಿ ಸಿಲಿಂಡರ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲವರು ಪ್ರವಾಹದ ನೀರಿನಲ್ಲೇ ಇಳಿದು ಸಾಹಸ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಯಗಡ ಜಿಲ್ಲಾಧಿಕಾರಿ ಕಿಶನ್ ಜಾವಳೆ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದ್ದಾರೆ. ನದಿ ಅಥವಾ ಹಳ್ಳಕೊಳ್ಳಗಳಲ್ಲಿ ತೇಲಿಬರುವ ಸಿಲಿಂಡರ್‌ಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಅಥವಾ ಮನೆಗೆ ಕೊಂಡೊಯ್ಯಬಾರದು ಎಂದು ಅವರು ಸೂಚಿಸಿದ್ದಾರೆ.
ಪ್ರವಾಹದಲ್ಲಿ ಕೊಚ್ಚಿಹೋದ ಸಿಲಿಂಡರ್‌ಗಳ ವಾಲ್ವ್‌ಗಳು ಹಾನಿಗೊಳಗಾಗಿರುವ ಸಾಧ್ಯತೆ ಇದ್ದು, ಗ್ಯಾಸ್ ಸೋರಿಕೆ ಉಂಟಾಗಿದ್ದರೆ ಭಾರೀ ಸ್ಫೋಟ ಸಂಭವಿಸುವ ಅಪಾಯವಿದೆ. ಆದ್ದರಿಂದ ಸಿಲಿಂಡರ್‌ಗಳು ಕಂಡುಬಂದರೆ ತಕ್ಷಣ ಸ್ಥಳೀಯ ಆಡಳಿತ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಸದ್ಯ ಎಚ್‌ಪಿಸಿಎಲ್‌ನ ತಾಂತ್ರಿಕ ತಂಡ ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿ ಪ್ರವಾಹದಲ್ಲಿ ತೇಲಿಹೋದ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

