ಕುಕ್ಕೆ ಸುಬ್ರಹ್ಮಣ್ಯಕ್ಕೆ ಪೂಜೆಗೆ ಬಂದ ಯಾತ್ರಾರ್ಥಿ : ನದಿಯಲ್ಲಿ ಶವವಾಗಿ ಪತ್ತೆ

0
9

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರ್ಪಸಂಸ್ಕಾರ ಸೇವೆಗಾಗಿ ಆಗಮಿಸಿದ್ದ ಯಾತ್ರಾರ್ಥಿಯೊಬ್ಬರ ಮೃತದೇಹ ಮಂಗಳವಾರ ಬೆಳಗ್ಗೆ ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ. ಮೃತರನ್ನು ತುಮಕೂರು ಜಿಲ್ಲೆಯ ತುರುವೇಕೆರೆ ನಿವಾಸಿ ದೇವೇಗೌಡ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ದೇವೇಗೌಡ ಅವರು ತುರುವೇಕೆರೆಯಿಂದ ಇತರ ಯಾತ್ರಾರ್ಥಿಗಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಇಲ್ಲಿ ಸರ್ಪಸಂಸ್ಕಾರ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಉದ್ದೇಶದಿಂದ ಬಂದಿದ್ದ ಅವರು, ದೂರದ ಪ್ರಯಾಣದ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಪೂಜೆಗೆ ತೆರಳದೆ ತಾವು ತಂಗಿದ್ದ ವಸತಿಗೃಹದಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ.

ಕುಮಾರಧಾರ ನದಿಯಲ್ಲಿ ಮೃತದೇಹ ಪತ್ತೆ

ಮಂಗಳವಾರ ಮುಂಜಾನೆ ಸುಬ್ರಹ್ಮಣ್ಯದ ಕುಲ್ಕುಂದ ಕಾಲನಿ ರಸ್ತೆಯಿಂದ ಕುಮಾರಧಾರ ನದಿಗೆ ಸಂಪರ್ಕ ಕಲ್ಪಿಸುವ ಪ್ರದೇಶದ ಸಮೀಪ ನದಿಯ ನೀರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ತೇಲುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ತಕ್ಷಣ ಈ ಕುರಿತು ಮಾಹಿತಿ ಹರಡಿದ್ದು, ಮೃತರ ಗುರುತು ಪತ್ತೆಹಚ್ಚುವ ಕಾರ್ಯ ನಡೆಯಿತು.

ಇನ್ನೊಂದೆಡೆ, ವಸತಿಗೃಹದಲ್ಲಿ ತಂಗಿದ್ದ ದೇವೇಗೌಡ ಅವರು ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಅವರೊಂದಿಗೆ ಬಂದಿದ್ದ ಯಾತ್ರಾರ್ಥಿಗಳು ಹುಡುಕಾಟ ನಡೆಸಿದ್ದರು. ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಲು ತೆರಳಿದ ವೇಳೆ ನದಿಯಲ್ಲಿ ಮೃತದೇಹ ಪತ್ತೆಯಾಗಿರುವ ಮಾಹಿತಿ ಅವರಿಗೆ ತಿಳಿದುಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹ ದೇವೇಗೌಡ ಅವರದ್ದೇ ಎಂಬುದು ದೃಢಪಟ್ಟಿದೆ.

ಸಾವಿನ ಸುತ್ತ ಹಲವು ಪ್ರಶ್ನೆಗಳು

ಅನಾರೋಗ್ಯದಿಂದ ವಸತಿಗೃಹದಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ದೇವೇಗೌಡ ಅವರು ನದಿಯ ಸಮೀಪಕ್ಕೆ ಹೇಗೆ ತೆರಳಿದರು? ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆಯೇ ಅಥವಾ ಸಾವಿಗೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಹಾಗೂ ಮಹಜರು ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.