ಜೈ ತುಲುನಾಡ್ ಉಡುಪಿ ಘಟಕದಿಂದ ಪಚ್ಚೆದೈಸಿರಿ ಗಿಡ ನೆಡುವ ಅಭಿಯಾನ

0
39

ಉಡುಪಿ : ಜೈ ತುಲುನಾಡ್ (ರಿ.) ಉಡುಪಿ ಘಟಕದ ವತಿಯಿಂದ ಪಚ್ಚೆದೈಸಿರಿ – ಇನಿತ ದೈ ಎಲ್ಲೆದ ಉಸುಲು ಎನ್ನುವ ಗಿಡ ನೆಡುವ ಕಾರ್ಯಕ್ರಮ ಜೂನ್ 07ರ ಆದಿತ್ಯವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆದಿಉಡುಪಿಯಲ್ಲಿ ನಡೆಯಿತು.

ಅತಿಥಿಗಳಾಗಿ ಆಗಮಿಸಿದಂತಹ ಉಡುಪಿ ವಲಯದ ಉಪ ಅರಣ್ಯಾಧಿಕಾರಿಯಾದ ಜುನೇದ್ ಅಕ್ತರ್, ಬಿ ಫಾರೆಸ್ಟರ್ ಎಚ್ ದೇವರಾಜ್ ಪಾಣ, ಆದಿಉಡುಪಿ ಶಾಲೆಯ ಸಂಚಾಲಕರಾದ ಗಣೇಶ್ ರಾವ್ ಜೈ ತುಲುನಾಡ್ (ರಿ.) ಕೇಂದ್ರ ಸಮಿತಿಯ ಜೊತೆ ಕೋಶಾಧಿಕಾರಿಯಾದ ನಾಗರಾಜ್ ಶೆಟ್ಟಿಗಾರ್, ಜೈ ತುಲುನಾಡ್ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಸಂತೋಷ್. ಎನ್. ಎಸ್ ಕಟಪಾಡಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಉಡುಪಿ ವಲಯದ ಬಿ ಫಾರೆಸ್ಟರ್ ಎಚ್. ದೇವರಾಜ್ ಪಾಣ ಮಾತನಾಡಿ ಹಿಂದಿನ ಕಾಲದಲ್ಲಿ ತುಳುನಾಡಿನ ಜನರು ಪ್ರಕೃತಿ ಆರಾಧಕರಾಗಿದ್ದು ಗಿಡ ಮರಗಳನ್ನು ಪೋಷಿಸಿ ಉಳಿಸಿಕೊಂಡಿದ್ದರು, ಆದರೆ ಈಗಿನ ಕಾಲದಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಸಾವಿರಾರು ಮರಗಳು ನಾಶವಾಗುತ್ತಿದ್ದು ಅದನ್ನು ಉಳಿಸಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಅವಶ್ಯಕವಾಗಿದೆ. ಜೈ ತುಲುನಾಡ್ (ರಿ.) ಸಂಘಟನೆಯ ವತಿಯಿಂದ ಇಂತಹ ಅನೇಕ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.

ಶಾಲೆಯ ಸಂಚಾಲಕರಾದ ಗಣೇಶ್ ರಾವ್ ಗಿಡ ನೆಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಜೈ ತುಲುನಾಡ್ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಸಂತೋಷ್. ಎನ್. ಎಸ್ ಕಟಪಾಡಿ ಮಾತನಾಡಿ ಸಂಘಟನೆ ಕಳೆದ 10 ವರ್ಷಗಳಿಂದ ತುಳು ಬಾಷೆ, ತುಳು ಲಿಪಿ ಉಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಂತಹ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ತುಳುನಾಡಿನ ಜನರು ಪರಿಸರ ದಿನಾಚರಣೆ ಯಾಕೆ ಆಚರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೈ ತುಲುನಾಡ್ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸುಶೀಲಾ ಜಯಕರ್ ಕೊಡವೂರು, ಉಡುಪಿ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಜೈ ತುಲುನಾಡ್ (ರಿ.) ಉಡುಪಿ ಘಟಕದ ಕಾರ್ಯದರ್ಶಿಯಾದ ಪ್ರಜ್ಞಾ ಶ್ರೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here