ಆಟವಾಡುವಾಗ ಗಂಟಲಲ್ಲಿ ಸಿಲುಕಿದ ಪ್ಲಾಸ್ಟಿಕ್ ಚೆಂಡು : ನಾಲ್ಕು ವರ್ಷದ ಬಾಲಕಿ ಸಾವು!

0
27

ತಿಂಡಿ ಪ್ಯಾಕೆಟ್‌ನೊಂದಿಗೆ ನೀಡಲಾಗಿದ್ದ ಸಣ್ಣ ಪ್ಲಾಸ್ಟಿಕ್ ಚೆಂಡನ್ನು ಆಕಸ್ಮಿಕವಾಗಿ ನುಂಗಿದ ಪರಿಣಾಮ ನಾಲ್ಕು ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮೃತ ಬಾಲಕಿಯನ್ನು ಆಲಿಯಾ ಶೇಖ್ (4) ಎಂದು ಗುರುತಿಸಲಾಗಿದೆ. ಚನ್ನಗಿರಿಯ ಕೌಸರ್ ಮಸೀದಿ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಈ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ಬಾಲಕಿ 5 ರೂಪಾಯಿ ಬೆಲೆಯ ತಿಂಡಿ ಪ್ಯಾಕೆಟ್ ಖರೀದಿಸಿದ್ದು, ಅದರೊಂದಿಗೆ ಸಣ್ಣ ಪ್ಲಾಸ್ಟಿಕ್ ಚೆಂಡನ್ನು ನೀಡಲಾಗಿತ್ತು. ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಚೆಂಡನ್ನು ಬಾಯಿಗೆ ಹಾಕಿಕೊಂಡ ಬಾಲಕಿ ಅದನ್ನು ನುಂಗಿದ್ದಾಳೆ. ಪರಿಣಾಮ ಚೆಂಡು ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟಕ್ಕೆ ತೀವ್ರ ತೊಂದರೆಯಾಗಿದೆ.

ತಕ್ಷಣವೇ ಕುಟುಂಬದವರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತುರ್ತು ಚಿಕಿತ್ಸೆ ನೀಡಿ ಬಾಲಕಿಯನ್ನು ಉಳಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಈ ದುರ್ಘಟನೆ ಮಕ್ಕಳಿಗೆ ಮಾರಾಟ ಮಾಡುವ ತಿಂಡಿ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಕಡಿಮೆ ಬೆಲೆಯ ತಿಂಡಿ ಪ್ಯಾಕೆಟ್‌ಗಳೊಂದಿಗೆ ಆಕರ್ಷಣೆಗಾಗಿ ಸಣ್ಣ ಆಟಿಕೆಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ನೀಡಲಾಗುತ್ತಿದ್ದು, ಇವು ಚಿಕ್ಕ ಮಕ್ಕಳ ಪಾಲಿಗೆ ಮಾರಕವಾಗುವ ಸಾಧ್ಯತೆಯಿದೆ.

ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಉತ್ಪನ್ನಗಳ ಮಾರಾಟದ ಮೇಲೆ ನಿಗಾ ವಹಿಸಬೇಕು ಹಾಗೂ ಸಣ್ಣ ಆಟಿಕೆಗಳ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.