ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ – ಪೊಲೀಸರು ಬಿಡುಗಡೆ ಮಾಡಿದ ಮಾರ್ಗಸೂಚಿ

0
60

ಬೆಂಗಳೂರು : ಪ್ರಧಾನಿ Narendra Modi ಅವರು ಇಂದು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಬೆಂಗಳೂರು ಸಂಚಾರಿ ಪೊಲೀಸರು ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ.

ಪ್ರಧಾನಿಯವರು ಇಂದು ಹೆಚ್‌ಎಎಲ್ (HAL) ವಿಮಾನ ನಿಲ್ದಾಣದ ಸಮೀಪ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಳಿಕ Art of Living Foundation ಸಂಸ್ಥೆಯ 45ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ.

ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ಸಂಚಾರ ನಿರ್ಬಂಧ?

  • ಹಳೆಯ ವಿಮಾನ ನಿಲ್ದಾಣ ರಸ್ತೆಯಿಂದ ಡಿಜಿಸಿಎ (DGCA) ಕಚೇರಿವರೆಗಿನ ಏರ್‌ಪೋರ್ಟ್ ಎಕ್ಸಿಟ್ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
  • ಅಂಬ್ರೆಲ್ಲಾ ಜಂಕ್ಷನ್‌ನಿಂದ ಹೆಚ್‌ಎಎಲ್ ಗೇಟ್ ನಂ.30 ರಸ್ತೆಯವರೆಗೆ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
  • ಎಸ್‌ಡಿ ರೋಡ್ ಜಂಕ್ಷನ್‌ನಿಂದ ಟ್ರಿನಿಟಿ ಜಂಕ್ಷನ್‌ವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ.
  • ಹೆಚ್‌ಎಎಲ್ ಗೇಟ್ ನಂ.30 ರಸ್ತೆ ಹಾಗೂ ಏರ್‌ಪೋರ್ಟ್ ಎಕ್ಸಿಟ್ ರಸ್ತೆಯಲ್ಲೂ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.

ವಾಹನ ಸವಾರರಿಗೆ ಸೂಚನೆ

ಮರತಹಳ್ಳಿ/ವೈಟ್‌ಫೀಲ್ಡ್ ಭಾಗದಿಂದ ಬರುವವರು:
ಬೆಳಿಗ್ಗೆ 8:30ರೊಳಗೆ ಗೇಟ್ ನಂ.2 ಬಳಿ ಪ್ರಯಾಣಿಕರನ್ನು ಇಳಿಸಿ, ಮುರುಗೇಶ್ಪಾಳ್ಯದ ಸರ್ ಎಂ. ವಿಶ್ವೇಶ್ವರಯ್ಯ ಕಾಲೇಜು ಮೈದಾನದಲ್ಲಿ ವಾಹನ ಪಾರ್ಕ್ ಮಾಡಲು ಸೂಚಿಸಲಾಗಿದೆ.

ನಗರದ ಕಡೆಯಿಂದ ಬರುವವರು:
ಗೇಟ್ ನಂ.2 ಬಳಿ ಪ್ರಯಾಣಿಕರನ್ನು ಇಳಿಸಿ, ಸುರಂಜನ್ ದಾಸ್ ರಸ್ತೆಯಲ್ಲಿರುವ ಹೆಚ್‌ಎಎಲ್ ಬಸ್ ಯಾರ್ಡ್‌ನಲ್ಲಿ ವಾಹನ ನಿಲ್ಲಿಸಬಹುದು.

ಪರ್ಯಾಯ ಮಾರ್ಗಗಳ ವಿವರ

  • ನೈಸ್ ರಸ್ತೆಯಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಸೋಂಪುರ ಕ್ಲೋವರ್‌ಲೀಫ್ ಜಂಕ್ಷನ್‌ನಿಂದ ಕನಕಪುರ ರಸ್ತೆವರೆಗೆ ಸಂಚಾರ ನಿರ್ಬಂಧ.
  • ತುಮಕೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುವವರು ಸಿಎಂಟಿಐ ಜಂಕ್ಷನ್ ಹಾಗೂ ರಾಜಕುಮಾರ್ ಪುಣ್ಯಭೂಮಿ ರಸ್ತೆ ಬಳಸಬೇಕು.
  • ಮಾಗಡಿ ರಸ್ತೆ ವಾಹನ ಸವಾರರು ಸುಮನಹಳ್ಳಿ ಜಂಕ್ಷನ್ ಮೂಲಕ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ.
  • ಮೈಸೂರು ರಸ್ತೆ ಪ್ರಯಾಣಿಕರು ನಯಂಡಹಳ್ಳಿ ಜಂಕ್ಷನ್ ಹಾಗೂ ಹೊರವರ್ತುಲ ರಸ್ತೆ ಬಳಸಬಹುದು.
  • ಬನ್ನೇರುಘಟ್ಟ ರಸ್ತೆ ಭಾಗಕ್ಕೆ ತೆರಳುವವರು ಹರಿನಗರ ಕ್ರಾಸ್ ಹಾಗೂ ಜಂಬೂಸವಾರಿ ದಿಣ್ಣೆ ರಸ್ತೆ ಮೂಲಕ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ನಗರದಲ್ಲಿ ಭದ್ರತಾ ತಪಾಸಣೆ ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಸಾಧ್ಯವಾದರೆ ಪರ್ಯಾಯ ಮಾರ್ಗ ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here