ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಸನ್ಮತಿ ಪತ್ರಿಕೆಯ ಜುಲೈ ತಿಂಗಳ ಸಂಚಿಕೆ ಬಿಡುಗಡೆ, ಸಂವಾದ ಹಾಗೂ ಪತ್ರಕರ್ತರಿಗೆ ಪಿಎಂಎಸ್‌ಬಿವೈ(ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನಾ) ನೋಂದಣಿ ಕಾರ್ಯಕ್ರಮವನ್ನು ಪ್ರತಿಕಾ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿ ಪತ್ರಿಕೆ ಬಿಡುಗಡೆ ಮಾಡಿದ ಉಡುಪಿ ಕೆನರಾ ಲೀಡ್ ಬ್ಯಾಂಕಿನ ಮುಖ್ಯ ಪ್ರಬಂಧಕ ಹರೀಶ್, ಆಹಾರ ಸಂಸ್ಕರಣೆ ಉದ್ಯಮಕ್ಕಾಗಿ ಯೋಜನೆ ಇದ್ದು, ಇದರಲ್ಲಿ ಶೇ.೫೦ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ೫೦೦-೬೦೦ ಘಟಕಗಳು ಈ ಯೋಜನೆಯ ಲಾಭ ಪಡೆದುಕೊಂಡಿವೆ. ಮುದ್ರಾ ಯೋಜನೆಯಲ್ಲಿ ೧೦ಲಕ್ಷ ರೂ. ಒಳಗೆ ಸಾಲ ಪಡೆದುಕೊಂಡರೆ ಮತ್ತು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ೭.೫ಲಕ್ಷ ರೂ.ವರೆಗಿನ ವಿದ್ಯಾಭ್ಯಾಸ ಸಾಲದಲ್ಲಿಯೂ ಯಾವುದೇ ಅಡಮಾನ ಇರಿಸುವ ಅಗತ್ಯ ಇಲ್ಲ ಎಂದರು.
ಎಟಿಎಂ ಕಾರ್ಡ್ ಹೊಂದಿದವರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ಪರಿಹಾರ ಒದಗಿಸಲು ಅವಕಾಶ ಇದೆ. ಮುದ್ರಾ ಸೇರಿದಂತೆ ವಿವಿಧ ಉದ್ಯಮಶೀಲತೆ ಯೋಜನೆಯಲ್ಲಿ ಪ್ರತಿ ವರ್ಷ ಉಡುಪಿ ಜಿಲ್ಲೆಯಿಂದ ೩೦೦೦ಕೋಟಿ ರೂ. ಸಾಲದ ಗುರಿಯನ್ನು ಎಲ್ಲ ಬ್ಯಾಂಕ್‌ಗಳಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಅಲ್ಲದೆ ಇವರು ಬ್ಯಾಂಕುಗಳಲ್ಲಿ ಸಿಗುವ ಕೃಷಿ ಸಾಲ, ಶಿಕ್ಷಣ ಸಾಲ ಸಹಿತ ವಿವಿಧ ಸಾಲಗಳು, ಠೇವಣಿ ಯೋಜನೆಗಳು ಹಾಗೂ ಜೀವ- ಆರೋಗ್ಯ-ಅಪಘಾತ ವಿಮೆ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಸಮಾಲೋಚಕಿ ಮೀರಾ ಹಾಜರಿದ್ದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಕೋಶಾಧಿಕಾರಿ ಹರೀಶ್ ಕುಂದರ್, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಂಕಿತ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

