ಬಂಟ್ವಾಳ: ಇಲ್ಲಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಸುಮಾರು ರೂ 6ರಿಂದ 7 ಕೋಟಿಗೂ ಮಿಕ್ಕಿ ಆದಾಯ ಸರ್ಕಾರದ ಪಾಲಾಗುತ್ತಿದ್ದು, ಈ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸುವುದರ ಜೊತೆಗೆ ಸುಸಜ್ಜಿತ ಗೋಶಾಲೆ ನಿರ್ಮಿಸಬೇಕು ಮತ್ತಿತರ ಬೇಡಿಕೆ ಮುಂದಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಏ. 6ರಂದು ಬೆಳಿಗ್ಗೆ ಗಂಟೆ 5.30ಕ್ಕೆ ಬಿ.ಸಿ.ರೋಡಿನಿಂದ ಬೃಹತ್ ಪಾದಯಾತ್ರೆ ಆಯೋಜಿಸಿದೆ ಎಂದು ವಕೀಲ ಪ್ರಸಾದ್ ಕುಮಾರ್ ರೈ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ದೇವಸ್ಥಾನದಲ್ಲಿ ಮಕ್ಕಳಿಗೆ ಹಿಂದೂ ಧಾರ್ಮಿಕ ಶಿಕ್ಷಣ ಸೇರಿದಂತೆ ವರ್ಷಕ್ಕೆ ಒಂದು ಬಾರಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಬೇಕು. ದೇವಸ್ಥಾನದಲ್ಲಿ ಭಕ್ತರಿಗೆ ರಾತ್ರಿ ಭೋಜನೆ ಸಹಿತ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭರತ್ ಕುಮ್ಡೇಲು, ಕ.ಕೃಷ್ಣಪ್ಪ ಕಲ್ಲಡ್ಕ, ರಾಜೇಶ ಗಂಜಿಮಠ, ಕೇಶವ ದೈಪಲ, ಸಂತೋಷ್ ಸರಪಾಡಿ ಮತ್ತಿತರರು ಇದ್ದರು.