ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದ ವತಿಯಿಂದ ಏ.5ರಿಂದ 6ರತನಕ ‘ರಜತ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹರೀಶ ಕುಲಾಲ್ ಹೇಳಿದ್ದಾರೆ.ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಕುಗ್ರಾಮದಂತಿರುವ ನೇರಂಬೋಳು ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಕ್ರಿಯಾಶೀಲ ಸಂಘಟನೆಯಾಗಿ ವಿವಿಧ ಪ್ರಶಸ್ತಿಗಳಿಗೆ ಸಂಘಟನೆ ಭಾಜನವಾಗಿದೆ’ ಎಂದರು.
ಸAಘದ ಗೌರವಾಧ್ಯಕ್ಷ ಮನೋಹರ ನೇರಂಬೋಳು ಮಾತನಾಡಿ, ‘ ಈಗಾಗಲೇ 30ಕ್ಕೂ ಮಿಕ್ಕಿ ಮಂದಿ ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಯಕ್ಷಗಾನ ತರಬೇತಿ ನೀಡಲಾಗಿದ್ದು, ಪ್ರತೀ ವರ್ಷ ಒಂದು ವಿದ್ಯಾರ್ಥಿಯನ್ನು ದತ್ತು ಸ್ವೀಕರಿಸಿ ಉಚಿತ ಶಿಕ್ಷಣ ನೀಡುತ್ತಿದೆ.’ ಎಂದರು. ಮುಂದಿನ ದಿನಗಳಲ್ಲಿ ಇಬ್ಬರು ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಉಚಿತ ಶಿಕ್ಷಣ ನೀಡಲು ಚಂತನೆ ನಡೆಸಲಾಗಿದೆ ಎಂದರು.
ಏ.5 ಮತ್ತು 6ರಂದು ಸಂಜೆ ಸಭಾ ಕಾರ್ಯಕ್ರಮ ಮತ್ತು ಯಕ್ಷಗಾನ ಹಾಗೂ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯಶೋಧರ ಪೂಜಾರಿ, ರವೀಂದ್ರ ಕುಲಾಲ್, ಹರಿಶ್ಚಂದ್ರ ಪೂಜಾರಿ, ಪದ್ಮನಾಭ ಪೂಜಾರಿ, ಗಣೇಶ ಆಚಾರ್ಯ ಮತ್ತಿತರರು ಇದ್ದರು.