ಮಾದಕ ವಸ್ತು ಜಾಲ ಭೇದಿಸಿದ ಪೊಲೀಸರು: 9 ಆರೋಪಿಗಳ ಬಂಧನ

0
26

ಉಡುಪಿ : ಜಿಲ್ಲೆಯಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಮರ ಸಾರಿರುವ ಉಡುಪಿ ನಗರ ಮತ್ತು ಶಿರ್ವ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಬೃಹತ್ ಪ್ರಮಾಣದ ಗಾಂಜಾ, ಮೆಥಾಂಫೆಟಮೈನ್, ಕಾರು, ಮೊಬೈಲ್ ಹಾಗೂ ನಗದು ಸೇರಿದಂತೆ ಒಟ್ಟು 16,01,584 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು, 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಬಳಿ ಕಾರು ಮತ್ತು ಸ್ಕೂಟರ್‌ನಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ದಿಢೀರ್ ದಾಳಿ ನಡೆಸಿದ ಪೊಲೀಸರು, 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಲ್ನಾಜ್ @ ಮೊಹಮ್ಮದ್ ಅನಾಸ, ಮಹಮ್ಮದ್ ಅಲ್ತಾಪ್, ಸ್ಟ್ಯಾನಿ ಸಂದೀಪ್, ಶಾಕೀಬ್, ಮಹಮ್ಮದ್ ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಬಂಧಿತರು. ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತಂದು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ.

ಬಂಧಿತ ಆರೋಪಿಗಳಿಂದ 67, 714 ಮೌಲ್ಯದ 1354.28 ಗ್ರಾಂ ಗಾಂಜಾ, 1,30,960 ರೂ ಮೂಲ್ಯದ 32.74 ಗ್ರಾಂ ಮೆಥಾಂಫೆಟಮೈನ್, 10,25,000 ರೂ ಮೌಲ್ಯದ 2 ಕಾರುಗಳು ಮತ್ತು 1 ಸ್ಕೂಟರ್, 9 ಮೊಬೈಲ್ ಫೋನ್‌ಗಳು, 2 ಡಿಜಿಟಲ್ ತೂಕದ ಯಂತ್ರಗಳು ಹಾಗೂ 75,010 ನಗದು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಳ್ಳಿಯಲ್ಲಿ ಗಾಂಜಾ ಅಡ್ಡಾದ ಮೇಲೆ ದಾಳಿ

ಉಡುಪಿ ನಗರ ಪೊಲೀಸರು ಖಚಿತ ಮಾಹಿತಿ ಆಧರಿಸಿ, ಶಿವಳ್ಳಿ ಗ್ರಾಮದ ವಾದಿರಾಜ ರಸ್ತೆಯ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿದ್ದು, ಸಾಗರ ತಾಲೂಕು ಮೂಲದ ಶ್ರೀವತ್ಸ ಕೆ.ಜಿ (31) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ. ಈತನಿಂದ 83,000 ರೂ ಮೌಲ್ಯದ 1 ಕೆಜಿ 659.91 ಗ್ರಾಂ ಗಾಂಜಾ, 1,26,500 ನಗದು ಹಾಗೂ ಡಿಜಿಟಲ್ ಸ್ಕೇಲ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆಯ ಅಪರಾಧ ಹಿನ್ನೆಲೆ ಹೊಂದಿದ್ದ ಆರೋಪಿಗಳು

ಬಂಧಿತ ಆರೋಪಿಗಳಲ್ಲಿ ಹಲವರು ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಮ್ತಿಯಾಜ್ ವಿರುದ್ಧ ಬ್ರಹ್ಮಾವರ ಠಾಣೆಯ 1 ಕೊಲೆ ಪ್ರಕರಣ, ಉಡುಪಿ ನಗರದಲ್ಲಿ 3, ಮಣಿಪಾಲದಲ್ಲಿ 3 ಹಾಗೂ ಮಲ್ಪೆಯಲ್ಲಿ 1 ಸೇರಿದಂತೆ ಒಟ್ಟು 8 ಪ್ರಕರಣಗಳಿವೆ. ಮಹಮ್ಮದ್ ಫೈಜಲ್ ವಿರುದ್ಧ ಮಲ್ಪೆ, ಕಾರ್ಕಳ ಗ್ರಾಮಾಂತರ ಹಾಗೂ ಮಣಿಪಾಲ ಠಾಣೆಗಳಲ್ಲಿ ಒಟ್ಟು 3 ಪ್ರಕರಣ, ಅಜಯ್ ಕುಮಾರ್ ವಿರುದ್ಧ ಉಡುಪಿ ನಗರ ಠಾಣೆಯ 1 ದರೋಡೆ ಪ್ರಕರಣ, ಮಣಿಪಾಲ ಹಾಗೂ ಶಿರ್ವಾ ಠಾಣೆಯಲ್ಲಿ ತಲಾ 1 ಸೇರಿದಂತೆ ಒಟ್ಟು 3 ಪ್ರಕರಣ, ಸಂತೋಷ್ ದೇವಾಡಿಗ ಮೇಲೆ ಉಡುಪಿ ನಗರ ಠಾಣೆಯಲ್ಲಿ 2 ಗಾಂಜಾ ಸೇವನೆ ಪ್ರಕರಣ, ಸ್ಟ್ಯಾನ್ಲಿ ಸಂದೀಪ್ ವಿರುದ್ಧ ಮಣಿಪಾಲ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.