ಕಾರ್ಕಳ : ನಿಟ್ಟೆ ಗ್ರಾಮದ ಹೋಟೆಲ್‌ವೊಂದರಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜುಗಾರಿ ಆಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಸುಜೀತ್, ಅಭಿಮನ್ಯು, ಮಹೇಶ್, ಧೀರಜ್, ನರೇಶ್ ಕುಮಾರ್ ಹಾಗೂ ಪ್ರಶಾಂತ್ ಎಂದು ಗುರುತಿಸಲಾಗಿದೆ.
ಪೊಲೀಸರ ದಾಳಿ ವೇಳೆ ಯಶೋಧರ, ನೂರು ಮಹಮ್ಮದ್, ರವಿ ಶೆಟ್ಟಿ ಹಾಗೂ ಸತೀಶ್ ಸ್ಥಳದಿಂದ ಪರಾರಿಯಾಗಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಯ ವೇಳೆ ಜೂಜಾಟಕ್ಕೆ ಬಳಸಲಾಗಿದ್ದ ₹16,350 ನಗದು, ಏಳು ಮೊಬೈಲ್ ಫೋನ್‌ಗಳು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಇತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಪರಾರಿಯಾದ ಆರೋಪಿಗಳು ಹಾಗೂ ಹೋಟೆಲ್ ಮಾಲಕರ ಪತ್ತೆಗೆ ತನಿಖೆಯನ್ನು ಮುಂದುವರಿಸಿದ್ದಾರೆ.

