ಅಂಜಾರುದಲ್ಲಿ ಕೋಳಿ ಅಂಕ ಜೂಜಾಟದ ಮೇಲೆ ಪೊಲೀಸ್ ದಾಳಿ: 8 ಮಂದಿ ವಶ, ₹36,270 ನಗದು ಸೇರಿದಂತೆ ವಾಹನಗಳ ಜಪ್ತಿ

0
64

ಹಿರಿಯಡ್ಕ: ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜಾರು ಗ್ರಾಮದ ಮೂಡು ಅಂಜಾರು ಕಲ್ಕುಡ ದೇವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕ ಜೂಜಾಟದ ಮೇಲೆ ಹಿರಿಯಡ್ಕ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸ್ ತಂಡವು, ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಪರಸ್ಪರ ಕಾಳಗ ನಡೆಸುತ್ತಾ, ಅದರ ಮೇಲೆ ಹಣ ಪಣವಾಗಿಟ್ಟು ಜೂಜಾಟ ನಡೆಸುತ್ತಿರುವುದನ್ನು ಪತ್ತೆಹಚ್ಚಿತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ದಾಳಿ ನಡೆಸಿದ ವೇಳೆ, ಸ್ಥಳದಲ್ಲಿದ್ದ ಕೆಲವರು ಕಾಳಗದ ಕೋಳಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ದಾಳಿಯ ವೇಳೆ 8 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಅವರಿಂದ ₹36,270 ನಗದು, 8 ಮೋಟಾರ್ ಸೈಕಲ್‌ಗಳು ಹಾಗೂ ಒಂದು ಕಾರನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 46/2026 ದಾಖಲಿಸಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87 ಹಾಗೂ ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆಯ ಕಲಂ 11(1)(a) ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ. ಹಾಗೂ ಬ್ರಹ್ಮಾವರ ವೃತ್ತದ ಪೊಲೀಸ್ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಪುನೀತ್ ಕುಮಾರ್ ಬಿ.ಇ. ಮತ್ತು ಪಿಎಸ್‌ಐ ವಿಠಲ ಮಲವಡಕರ ಅವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.