ಜನಸೇವೆಗಾಗಿ ರಾಜಕೀಯ, ಜೀವಮಾನದ ಪಿಂಚಣಿಗಾಗಿ ಅಲ್ಲ: ನೇಮಿರಾಜ್ ರೈ

0
30

ಮಂಗಳೂರು : ಜನಪ್ರತಿನಿಧಿಗಳಿಗೆ ನೀಡಲಾಗುತ್ತಿರುವ ಜೀವಮಾನದ ಪಿಂಚಣಿ ವ್ಯವಸ್ಥೆಯನ್ನು ಮರುಪರಿಶೀಲಿಸಿ ಅಗತ್ಯವಿದ್ದರೆ ರದ್ದುಪಡಿಸಬೇಕು ಎಂದು ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಯುವ ವಿದ್ಯಾರ್ಥಿ ಹೋರಾಟಗಾರರು ವ್ಯಕ್ತಪಡಿಸಿರುವ “ಇದು ಆರಂಭ ಮಾತ್ರ, ಮುಂದಕ್ಕೆ ಇನ್ನೂ ಹಲವು ಜನಪರ ಸುಧಾರಣೆಗಳು ಆಗಬೇಕಿವೆ” ಎಂಬ ಅಭಿಪ್ರಾಯವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಒಂದು ಅವಧಿಗೆ ಮಾತ್ರ ಜನಪ್ರತಿನಿಧಿಯಾಗಿ ಆಯ್ಕೆಯಾದ ಕಾರಣಕ್ಕೆ ಜೀವಮಾನದವರೆಗೆ ಜನರ ತೆರಿಗೆ ಹಣದಿಂದ ಪಿಂಚಣಿ ಪಡೆಯುವ ವ್ಯವಸ್ಥೆ ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಸರ್ಕಾರಿ ನೌಕರರು ಹಲವು ವರ್ಷಗಳ ಸೇವೆಯ ಬಳಿಕ ನಿಯಮಾನುಸಾರ ಪಿಂಚಣಿ ಪಡೆಯುತ್ತಾರೆ. ಆದರೆ ಕೆಲವೇ ವರ್ಷಗಳ ಕಾಲ ಜನಪ್ರತಿನಿಧಿಯಾಗಿದ್ದವರಿಗೆ ಜೀವಮಾನದ ಪಿಂಚಣಿ ನೀಡುವುದು ನ್ಯಾಯಸಮ್ಮತವೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಇದು ಜನಪ್ರತಿನಿಧಿಗಳ ವಿರುದ್ಧದ ಹೋರಾಟವಲ್ಲ, ಬದಲಾಗಿ ಜನರ ತೆರಿಗೆ ಹಣದ ಸಮರ್ಪಕ ಬಳಕೆಗಾಗಿ ನಡೆಯಬೇಕಾದ ಚರ್ಚೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜಕೀಯವು ಜನಸೇವೆಯ ಮಾರ್ಗವಾಗಬೇಕು; ಜೀವಮಾನದ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ಸಾಧನವಾಗಬಾರದು ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಜನಪ್ರತಿನಿಧಿಗಳ ವಿಶೇಷ ಸೌಲಭ್ಯಗಳು ಮತ್ತು ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸುವ ದಿಕ್ಕಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಿರುವ ಅವರು, ಭಾರತದಲ್ಲಿಯೂ ಈ ಕುರಿತು ಗಂಭೀರ ಚರ್ಚೆ ಆರಂಭವಾಗಿ, ಜನಪ್ರತಿನಿಧಿಗಳ ಪಿಂಚಣಿ ವ್ಯವಸ್ಥೆಯನ್ನು ಮರುಪರಿಶೀಲಿಸಿ ಅಗತ್ಯವಿದ್ದರೆ ರದ್ದುಪಡಿಸುವ ಧೈರ್ಯವನ್ನು ಸರ್ಕಾರಗಳು ತೋರಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದ ಖಜಾನೆ ಮೊದಲು ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಾಗಬೇಕು; ರಾಜಕೀಯ ವಿಶೇಷಾಧಿಕಾರಗಳಿಗೆ ಅಲ್ಲ. ಜನಸೇವೆಗೆ ಬರುವವರು ಸೇವಾ ಮನೋಭಾವದಿಂದ ಬರಬೇಕು, ಜೀವಮಾನದ ಸೌಲಭ್ಯಗಳ ನಿರೀಕ್ಷೆಯಿಂದ ಅಲ್ಲ ಎಂದು ಬೆಳ್ಳಿಪ್ಪಾಡಿ ನೇಮಿರಾಜ್ ರೈ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.