ವೃತ್ತಿ ಕೌಶಲ್ಯಾಭಿವೃದ್ಧಿಗೆ ಆಡ್-ಆನ್ ಕೋರ್ಸ್‌ಗಳ ಚಾಲನೆ

0
6

ಮಂಗಳೂರು: ಕೆನರಾ ಕಾಲೇಜು (ಸ್ವಾಯತ್ತ), ಮಂಗಳೂರಿನ ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ 2026–27ನೇ ಶೈಕ್ಷಣಿಕ ಸಾಲಿನ ವೃತ್ತಿ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವ ಆಡ್-ಆನ್ ಕೋರ್ಸ್‌ಗಳ ಉದ್ಘಾಟನಾ ಕಾರ್ಯಕ್ರಮ ಸೆ. 8ರಂದು ಕಾಲೇಜಿನಲ್ಲಿ ನಡೆಯಿತು.

ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಹಾಗೂ ಉದ್ಯೋಗಪರ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ‘Excel for Employability Skills’ ಹಾಗೂ ‘Effective Talent Prime in Commerce’ ಎಂಬ ಎರಡು ಹೆಚ್ಚುವರಿ ಕೋರ್ಸ್‌ಗಳನ್ನು ಪರಿಚಯಿಸಲಾಯಿತು. ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು.

ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಶ್ರೀಮತಿ ಸ್ವಾತಿ ನಾಯಕ್ ಅವರು ಈ ಕೋರ್ಸ್‌ಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಎಂ.ಕಾಂ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ಶ್ವೇತಾ ಪೈ ಹಾಗೂ ಶ್ರೀಮತಿ ಸ್ನೇಹಾ ಪೈ ಅವರು ಆಡ್-ಆನ್ ಕೋರ್ಸ್‌ಗಳ ಉದ್ದೇಶ, ಮಹತ್ವ ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಮಾರ್ ಕೆ.ಸಿ. ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಹೆಚ್ಚುವರಿ ಕೋರ್ಸ್‌ಗಳ ಸದುಪಯೋಗ ಪಡೆದುಕೊಳ್ಳಬೇಕು. ಶೈಕ್ಷಣಿಕ ಜ್ಞಾನದೊಂದಿಗೆ ಪ್ರಾಯೋಗಿಕ ಅನುಭವ ಹಾಗೂ ಉದ್ಯೋಗಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದ ವೃತ್ತಿ ಜೀವನಕ್ಕೆ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಅವರು, ವಿದ್ಯಾರ್ಥಿಗಳ ವೃತ್ತಿ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ದೃಷ್ಟಿಯಿಂದ ಸಾಂಪ್ರದಾಯಿಕ ಪಠ್ಯಕ್ರಮದ ಜೊತೆಗೆ ಇಂತಹ ಹೆಚ್ಚುವರಿ ಕೋರ್ಸ್‌ಗಳನ್ನು ಪರಿಚಯಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಇಂದಿನ ಸ್ಪರ್ಧಾತ್ಮಕ ಪರಿಸರದಲ್ಲಿ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿಯಬೇಕು ಎಂದು ಹೇಳಿದರು.

ಆಡ್-ಆನ್ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ದೊರೆಯಲಿದ್ದು, ಅವರ ಆತ್ಮವಿಶ್ವಾಸ ಹಾಗೂ ವೃತ್ತಿಪರ ಸಾಮರ್ಥ್ಯ ವೃದ್ಧಿಯಾಗಲಿದೆ. ವಿಶೇಷವಾಗಿ ಲೆಕ್ಕಪತ್ರ, ದತ್ತಾಂಶ ನಿರ್ವಹಣೆ, ಕಚೇರಿ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಈ ತರಬೇತಿಗಳು ಸಹಕಾರಿಯಾಗಲಿವೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಪಾಲಿ ಸ್ವಾಗತಿಸಿದರು. ಮಾನಸ ಕಾರ್ಯಕ್ರಮ ನಿರೂಪಿಸಿದರು. ಹೃಷಿತಾ ವಂದನಾರ್ಪಣೆ ಸಲ್ಲಿಸಿದರು.