ಬೈಂದೂರು : ನಾಡ ಗುಡ್ಡೆಅಂಗಡಿ ಶ್ರೀ ವನಯಕ್ಷೀ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವವು ಗುರುವಾರ ಭಕ್ತಿಭಾವದಿಂದ ಹಾಗೂ ವೈಭವಯುತವಾಗಿ ನೆರವೇರಿತು. ಬೈಂದೂರು ತಾಲೂಕಿನ ನಾಡಗುಡ್ಡೆಅಂಗಡಿ ಶ್ರೀ ವನಯಕ್ಷೀ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 9:20ಕ್ಕೆ ಶ್ರೀ ವನಯಕ್ಷೀ ದೇವಿಯ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಅತಿ ವಿಜೃಂಭಣೆಯಿಂದ ನೆರವೇರಿತು.
ವೇ.ಮೂ.ಜಿ. ದೇವದಾಸ್ ಕೃಷ್ಣಾನಂದ ಆಚಾರ್ಯ, ಗಂಗೊಳ್ಳಿ ಅವರ ಮಾರ್ಗದರ್ಶನದಲ್ಲಿ ವೇದಮಂತ್ರಗಳ ಘೋಷದೊಂದಿಗೆ ವಿವಿಧ ಧಾರ್ಮಿಕ ವಿಧಿ–ವಿಧಾನಗಳು ಹಾಗೂ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ಸಂಪನ್ನಗೊಂಡವು. ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ, ಭಕ್ತರಿಗೆ ದರ್ಶನ, ಸೇವೆ ಹಾಗೂ ಮಹಾ ಅನ್ನಸಂತರ್ಪಣೆ
ಕಾರ್ಯಕ್ರಮಗಳು ನಡೆದವು.
ದೇವಸ್ಥಾನದ ಕೋಶಅಧಿಕಾರಿ ಸತೀಶ್ ಎಂ. ನಾಯ್ಕ್ ಮಾತನಾಡಿ, ದೇವಿಯ ಮಹಿಮೆ ಅಪಾರವಾಗಿದ್ದು, ದೇವಿಯ ಕೃಪೆಯಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತಿವೆ ಗ್ರಾಮಸ್ಥರು ಹಾಗೂ ಭಕ್ತರ ಅಪಾರ ಸಹಕಾರದಿಂದ ಪ್ರತಿಷ್ಠಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಾಧ್ಯವಾಗಿದೆ. ಅಲ್ಲದೆ, ಪ್ರತಿ ಶುಕ್ರವಾರ ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಮನವಿ ಮಾಡಿದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವೀಂದ್ರ ಜೋಗಿ ಅವರು ಮಾತನಾಡಿ, ಶ್ರೀ ವನಯಕ್ಷೀ ದೇವಿಯ ಸನ್ನಿಧಿಯ ನಿರ್ಮಾಣ ಹಾಗೂ ಪ್ರತಿಷ್ಠಾ ಮಹೋತ್ಸವ ನೆರವೇರಿರುವುದು ತಮ್ಮ ಜೀವನದ ಸಾರ್ಥಕ ಕ್ಷಣವಾಗಿದೆ ದೇವಿಯ ಕೃಪೆಯಿಂದ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ಸಂತಸದ ಸಂಗತಿಯಾಗಿದೆ, ಮುಂದೆಯೂ ದೇವಸ್ಥಾನದ ಅಭಿವೃದ್ಧಿಗೆ ಎಲ್ಲ ಭಕ್ತರು ಕೈಜೋಡಿಸಿ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿ ಶೇಖರ್ ಪೂಜಾರಿ , ಗೌರಧ್ಯಕ್ಷರಾದ ಚಂದ್ರಯ್ಯ ಆಚಾರ್ಯ , ಸರ್ವ ಸದಸ್ಯರು, ಊರಿನ ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

