ಕಾಸರಗೋಡು : ‘ಆಪರೇಷನ್ ತೂಫಾನ್’ ವಿಶೇಷ ಕಾರ್ಯಾಚರಣೆಯ ಅಂಗವಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಭಾರಿ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮಧೂರು ಪಟ್ಟಣದ ಕೆ. ಇಬ್ರಾಹಿಂ ಬಾತ್ತಾ (36) ಎಂದು ಗುರುತಿಸಲಾಗಿದೆ. ಆರೋಪಿ ಸಾಗಿಸುತ್ತಿದ್ದ ಕಾರಿನಿಂದ 21,873 ಪ್ಯಾಕೆಟ್ ನಿಷೇಧಿತ ಪಾನ್ ಮಸಾಲಾ ಹಾಗೂ ತಂಬಾಕು ಉತ್ಪನ್ನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಮಾರಾಟದಿಂದ ಬಂದಿದ್ದ ನಗದು ಹಣವನ್ನೂ ವಶಪಡಿಸಿಕೊಳ್ಳಲಾಗಿದೆ.
ಮಧೂರಿನ ಪಟ್ಟ ಶಾಲೆ ಸಮೀಪ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ಕಾರು ಪೊಲೀಸರ ಗಮನಕ್ಕೆ ಬಂದಿತ್ತು. ವಾಹನದ ಗಾಜಿನ ಮೂಲಕ ಪರಿಶೀಲನೆ ನಡೆಸಿದಾಗ ಒಳಗೆ ಪ್ಲಾಸ್ಟಿಕ್ ಚೀಲಗಳು ಕಂಡುಬಂದಿದ್ದು, ಸಂಶಯಗೊಂಡ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನೊಳಗೆ ಭಾರಿ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ.
‘ಆಪರೇಷನ್ ತೂಫಾನ್’ ಕಾರ್ಯಾಚರಣೆಯ ಭಾಗವಾಗಿ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಈ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

