ಸಾಮಾಜಿಕ ಸೇವೆಗೆ ‘ರಾಷ್ಟ್ರೀಯ ಗೌರವ ಐಕಾನ್ ಅವಾರ್ಡ್’ಗೆ ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್ ಆಯ್ಕೆ

0
5

ಮಂಗಳೂರು : ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್ ಅವರು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ, ಸಮಾಜಮುಖಿ ಕಾರ್ಯಗಳು ಹಾಗೂ ಜನಪರ ಚಟುವಟಿಕೆಗಳನ್ನು ಗುರುತಿಸಿ ‘ರಾಷ್ಟ್ರೀಯ ಗೌರವ ಐಕಾನ್ ಅವಾರ್ಡ್ ಫಾರ್ ಸೋಶಿಯಲ್ ಸರ್ವಿಸ್ – 2026’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ವತಿಯಿಂದ ಪ್ರದಾನಗೊಳ್ಳುವ ಈ ಪ್ರತಿಷ್ಠಿತ ಪ್ರಶಸ್ತಿಯ ಪ್ರದಾನ ಸಮಾರಂಭವು ಆಗಸ್ಟ್ 23, 2026ರಂದು ಮಧ್ಯಾಹ್ನ 2 ಗಂಟೆಗೆ ನವದೆಹಲಿಯ ಹೋಟೆಲ್ ಸಮ್ರಾಟ್‌ನಲ್ಲಿ ನಡೆಯಲಿದೆ.

ಸಮಾಜದ ಅಭಿವೃದ್ಧಿಗೆ ಅವರ ನಿರಂತರ ಸೇವಾ ಮನೋಭಾವ, ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಯಶಸ್ವಿ ಸಂಘಟನೆ, ಜನಜಾಗೃತಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಗೌರವಕ್ಕೆ ಭಾಜನರಾಗಿರುವ ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್ ಅವರಿಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಅವರ ಸಾಮಾಜಿಕ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತಾರಗೊಂಡು ಸಮಾಜಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಈ ರಾಷ್ಟ್ರೀಯ ಮಟ್ಟದ ಗೌರವವು ಅವರ ಸಾಮಾಜಿಕ ಸೇವೆಗೆ ದೊರೆತ ಮತ್ತೊಂದು ಮಹತ್ವದ ಮಾನ್ಯತೆಯಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವವರಿಗೆ ಇದು ಪ್ರೇರಣೆಯಾಗಲಿದೆ.