ಉಡುಪಿ: ಕ್ಷೇತ್ರದ ಬ್ರಹ್ಮಾವರ ಮತ್ತು ಉಡುಪಿ ತಾಲೂಕುಗಳ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿ ಶೇಕಡಾ 40 ರಷ್ಟು ಮಳೆ ಅಭಾವ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತು ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಆ ಸಂದರ್ಭದಲ್ಲಿ ಹೊಸ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈಗಲೇ ಟ್ಯಾಂಕರ್ ನೀರು ಸರಬರಾಜು, ಬಾವಿಗಳ ರಿಪೇರಿ ಹಾಗೂ ಪಂಪ್ ಅಳವಡಿಕೆ ಕೆಲಸಗಳಿಗೆ ಟೆಂಡರ್ ಕರೆದು ‘ವರ್ಕ್ ಆರ್ಡರ್’ ನೀಡಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಕಿಂಡಿ ಆಣೆಕಟ್ಟು ಪರಿಶೀಲನೆ
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಮಾರು 100 ಕಿಂಡಿ ಆಣೆಕಟ್ಟುಗಳಿಗೆ ನವೆಂಬರ್ 20ರ ಒಳಗೆ ಅಲಿಗೆ (ಹಲಗೆ) ಅಳವಡಿಸುವ ಕಾರ್ಯ ಪೂರ್ಣಗೊಳ್ಳಬೇಕು. ಸ್ಥಳೀಯರ ಅನುಭವವನ್ನು ಪರಿಗಣಿಸಿ, ಹಲಗೆಗಳು ಕಟ್ ಆಗಿದ್ದರೆ ತಕ್ಷಣವೇ ಹೊಸ ಹಲಗೆ ಖರೀದಿ ಅಥವಾ ರಿಪೇರಿಗೆ ಕ್ರಮ ಕೈಗೊಳ್ಳಬೇಕು. ವರಾಹಿ ಯೋಜನೆಯಿಂದ ನವೆಂಬರ್ 30ರ ವೇಳೆಗೆ ಮೂಲ ನೀರು (ಸೋರ್ಸ್) ಲಭ್ಯವಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅದನ್ನು ತಕ್ಷಣವೇ ಬಳಸಿಕೊಳ್ಳಲು ವಿನಂತಿ ಮಾಡಲಾಗುವುದು. ಪಂಚಾಯಿತಿ ಮಟ್ಟದಲ್ಲಿ ಮುಂಜಾಗ್ರತೆ ಕ್ರಮವಾಗಿ ಬೋರ್ವೆಲ್ ಹಾಗೂ ಬಾವಿಗಳ ಹೂಳೆತ್ತುವುದು, ಪಂಪ್ಸೆಟ್ಗಳ ದುರಸ್ತಿ ಮತ್ತು ತುರ್ತು ಸಂದರ್ಭಕ್ಕಾಗಿ ಪ್ರತಿ ಪಂಚಾಯಿತಿಯಲ್ಲಿ ಕನಿಷ್ಠ ಒಂದು ‘ಸ್ಟ್ಯಾಂಡ್ಬೈ’ (ಸ್ಪೇರ್) ಪಂಪ್ ಸಿದ್ಧವಾಗಿಟ್ಟುಕೊಳ್ಳಬೇಕು. ಟ್ಯಾಂಕರ್ ನೀರು ಪೂರೈಕೆಗೆ ಸಂಬಂಧಿಸಿದಂತೆ ಪ್ರತಿ ಪಂಚಾಯಿತಿ ಮಟ್ಟದಲ್ಲಿ ವ್ಯತ್ಯಾಸಗಳಾಗುವುದನ್ನು ತಪ್ಪಿಸಲು, ಕ್ಷೇತ್ರದ ಜನಸಂಖ್ಯೆ ಹಾಗೂ ಭೌಗೋಳಿಕ ವ್ಯಾಪ್ತಿಯನ್ನು ಆಧಾರವಾಗಿಟ್ಟುಕೊಂಡು ಜಿಲ್ಲಾ ಮಟ್ಟದಲ್ಲಿ ಏಕರೂಪದ ನಿಯಮಾವಳಿ ರೂಪಿಸಿ ಟೆಂಡರ್ ಕರೆಯಲು ಸೂಚಿಸಲಾಗಿದೆ ಎಂದರು. ಕೆಮ್ಮಣ್ಣು, ಕಲ್ಯಾಣಪುರ ಸೇರಿದಂತೆ ಹಿನ್ನೀರು ಪ್ರದೇಶಗಳಲ್ಲಿ ಬಾವಿಗಳಲ್ಲಿ ಉಪ್ಪು ನೀರು ಬರುವ ಸಮಸ್ಯೆಯಿದ್ದು, ಅಂತಹ ಸೂಕ್ಷ್ಮ ಪ್ರದೇಶಗಳಿಗೆ ಆದ್ಯತೆಯ ಮೇಲೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಉಡುಪಿ ತಹಶೀಲ್ದಾರ್ ಗುರುರಾಜ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್, ಉಡುಪಿ ತಾಪಂ ಇಒ ವಿಜಯಾ, ಬ್ರಹ್ಮಾವರ ತಾಪಂ ಪ್ರಭಾರ ಇಒ ರಾಮ್ದಾಸ್ ಉಪಸ್ಥಿತರಿದ್ದರು.

