ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ‘ಶ್ರೀ ಮಹಾಧನ್ವಂತರಿ ಯಾಗ’ದ ಸಿದ್ಧತೆ: ಕಾರ್ಯಾಲಯದ ಶುಭಾರಂಭ!

0
10

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ದೀಪ ಪ್ರಜ್ವಲನೆ ಹಾಗೂ ಆಶೀರ್ವಚನ

ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಶ್ರೀ ಮಹಾಧನ್ವಂತರಿ ಯಾಗ’ದ ಪ್ರಚಾರ ಮತ್ತು ಪೂರ್ವ ಸಿದ್ಧತೆಗಳಿಗಾಗಿ ಪೇಜಾವರ ಮಠದ ಹಿಂಭಾಗದಲ್ಲಿ ನೂತನವಾಗಿ ಆರಂಭಿಸಲಾದ ಕಾರ್ಯಾಲಯದ ಉದ್ಘಾಟನಾ ಸಮಾರಂಭವು ನವೆಂಬರ್ 9ರಂದು ಸಂಜೆ ಭಕ್ತಿಪೂರ್ಣ ವಾತಾವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾಧನ್ವಂತರಿ ಯಾಗ ಸ್ವಾಗತ ಸಮಿತಿಯ ಸಂಚಾಲಕ ಗುರುಪ್ರಸಾದ್ ಗೌಡ ಅವರು, ಯಾಗದ ಸಿದ್ಧತೆಗಳಿಗಾಗಿ ಈಗಾಗಲೇ ಮೂರು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ವಿವಿಧ ಸಂಘಟನೆಗಳು ಹಾಗೂ ಧರ್ಮಾಭಿಮಾನಿಗಳು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದಾರೆ. ಯಾಗದ ಪ್ರಚಾರ ಕಾರ್ಯವನ್ನು ಮತ್ತಷ್ಟು ವೇಗಗೊಳಿಸುವ ಉದ್ದೇಶದಿಂದ ತಾತ್ಕಾಲಿಕ ಕಾರ್ಯಾಲಯವನ್ನು ಆರಂಭಿಸಲಾಗಿದ್ದು, ಪ್ರತಿದಿನ ಸಭೆ ಸೇರಿ ಪ್ರಚಾರ ಹಾಗೂ ಇತರ ಸಿದ್ಧತೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಲೋಕಕಲ್ಯಾಣ ಮತ್ತು ಧರ್ಮ ಸಂಸ್ಥಾಪನೆಯ ಉದ್ದೇಶದಿಂದ ನಡೆಯುವ ಇಂತಹ ಸಾತ್ತ್ವಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮತೇಜಸ್ಸನ್ನು ಹೆಚ್ಚಿಸುತ್ತವೆ. ಸಾರ್ವಜನಿಕರ ಆರೋಗ್ಯ ವೃದ್ಧಿ ಹಾಗೂ ಸದ್ಭಾವನೆಗಾಗಿ ಆಯೋಜಿಸಿರುವ ಮಹಾಧನ್ವಂತರಿ ಯಾಗವು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.

ಯಾಗದ ಪ್ರಯೋಜನವನ್ನು ಪ್ರತಿಯೊಬ್ಬ ಧರ್ಮಾಭಿಮಾನಿಯೂ ಪಡೆದುಕೊಳ್ಳಬೇಕು. ಈಗಾಗಲೇ ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಯಾಗದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಯಾಗ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು ಅವರು ಮಾತನಾಡಿ, ಸಮಾಜದ ವಿವಿಧ ಸಂಘಟನೆಗಳನ್ನು ಆಹ್ವಾನಿಸುವ ಹಾಗೂ ಯಾಗದ ಸಿದ್ಧತೆಗಳನ್ನು ಕಾರ್ಯರೂಪಕ್ಕೆ ತರುವ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ಆಯೋಜನಾ ಸಮಿತಿಯ ಸಂಚಾಲಕ ಗುರುಪ್ರಸಾದ್ ಗೌಡ ಸೇರಿದಂತೆ ಹಲವು ಧರ್ಮಾಭಿಮಾನಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.