ಈಗಾಗಲೆ ಕಂಬಳಕ್ಕೆ ಪೂರ್ವ ಸಿದ್ದತೆಗಳು ನಡೆಯುತ್ತಿದೆ: ಕಂಬಳ ಅಸೋಸಿಯೇಷನ್ ರಾಜ್ಯಾಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಬೆಳಪು

0
13

ಯದುವೀರ್ ಕಂಬಳವನ್ನು ವಿರೋಧಿಸಿಲ್ಲ, ಸಿಎಂ ವಿವೇಚನೆಗೆ ಬಿಟ್ಟಿದ್ದಾರೆ..!

ಮಂಗಳೂರು : ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಸ್ಪರ್ಧೆ ಆಯೋಜಿಸುವ ವಿಚಾರಕ್ಕೆ ಕೆಲ ವಲಯಗಳಿಂದ ವ್ಯಕ್ತವಾಗಿರುವ ವಿರೋಧದ ನಡುವೆಯೇ, ಕಂಬಳ ಅಸೋಸಿಯೇಷನ್ ರಾಜ್ಯಾಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಬೆಳಪು ಕಂಬಳ ಆಯೋಜನೆಗೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳವು ತುಳುನಾಡಿನ ಹೆಮ್ಮೆಯ ಸಾಹಸ ಕ್ರೀಡೆಯಾಗಿದ್ದು, ಇದು ಯಾವುದೇ ಹೊರ ರಾಜ್ಯ ಅಥವಾ ವಿದೇಶದ ಕ್ರೀಡೆ ಅಲ್ಲ. ರಾಜ್ಯದ ವಿವಿಧ ಭಾಗಗಳ ಸಂಸ್ಕೃತಿ, ಕಲೆ ಹಾಗೂ ಕ್ರೀಡೆಗಳು ಪರಸ್ಪರ ಪ್ರದರ್ಶನಗೊಳ್ಳುವುದು ಸಹಜವಾಗಿದ್ದು, ಅದೇ ರೀತಿಯಲ್ಲಿ ಮೈಸೂರು ದಸರಾದಲ್ಲೂ ಕಂಬಳ ನಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಬಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ ಅವರು, ಹೈಪವರ್ ಸಮಿತಿ ಸಭೆಯಲ್ಲಿ ಕಂಬಳದ ಬಗ್ಗೆ ಚರ್ಚೆಯಾಗಿದ್ದು, ಅಂತಿಮ ತೀರ್ಮಾನವನ್ನು ಸರ್ಕಾರ ಹಾಗೂ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದಾರೆ ಹೊರತು, ಕಂಬಳವನ್ನು ವಿರೋಧಿಸಿಲ್ಲ ಎಂದು ಹೇಳಿದರು.

ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿದಿನ ನೂರಾರು ಕರೆಗಳು ಬರುತ್ತಿದ್ದು, ಕಂಬಳ ಆಯೋಜನೆಗೆ ಜನರು ಬೆಂಬಲ ಸೂಚಿಸುತ್ತಿದ್ದಾರೆ. ಕೆಲವೇ ಕೆಲವು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಅದರ ಕಾರಣವೇನು ಎಂಬುದು ಗೊತ್ತಿಲ್ಲ ಎಂದು ಅವರು ತಿಳಿಸಿದರು.

ಕಂಬಳದಿಂದ ಯಾರಿಗೂ ಅಥವಾ ಕೋಣಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಇದು ಶಿಸ್ತುಬದ್ಧವಾಗಿ ನಡೆಯುವ ಪರಂಪರೆಯ ಕ್ರೀಡೆಯಾಗಿದ್ದು, ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ನಡೆದರೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಇದರಿಂದ ಸ್ಥಳೀಯ ವ್ಯಾಪಾರ, ಹೋಟೆಲ್ ಉದ್ಯಮ, ಸಾರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.

ರಾಜ್ಯದ ಮೂಲೆಮೂಲೆಗಳಿಂದ ವಿವಿಧ ಕಲಾ ತಂಡಗಳು ದಸರಾ ಮಹೋತ್ಸವದಲ್ಲಿ ಭಾಗವಹಿಸುವಂತೆ, ಕರಾವಳಿಯ ಹೆಮ್ಮೆಯ ಕಂಬಳಕ್ಕೂ ಅವಕಾಶ ನೀಡಬೇಕು. ಇತಿಹಾಸದಲ್ಲಿಯೇ ಮೈಸೂರು ಅರಸರು ಕಂಬಳಕ್ಕೆ ಪ್ರೋತ್ಸಾಹ ನೀಡಿರುವ ದಾಖಲೆಗಳಿವೆ ಎಂದು ಅವರು ಉಲ್ಲೇಖಿಸಿದರು.

ಅಕ್ಟೋಬರ್ 18 ಮತ್ತು 19ರಂದು ದಸರಾ ಕಂಬಳ ಆಯೋಜನೆಗೆ ಸಿದ್ಧತೆ ನಡೆಯುತ್ತಿದ್ದು, ಸರ್ಕಾರ ಅವಕಾಶ ನೀಡಿದರೆ ದಾನಿಗಳ ಸಹಕಾರದೊಂದಿಗೆ ಶಿಸ್ತುಬದ್ಧ ಹಾಗೂ ಮಾದರಿ ಕಂಬಳವನ್ನು ಮೈಸೂರಿನಲ್ಲಿ ಆಯೋಜಿಸಲು ಕಂಬಳ ಸಮಿತಿ ಸಂಪೂರ್ಣ ಸಿದ್ಧವಾಗಿದೆ ಎಂದು ದೇವಿ ಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here