ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ನವದೆಹಲಿಯ 7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಉನ್ನತ ಮಟ್ಟದ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ದೇಶದ ಭವಿಷ್ಯದ ಅಭಿವೃದ್ಧಿ, ಆಡಳಿತ ಸುಧಾರಣೆ ಹಾಗೂ ವಿಕಸಿತ ಭಾರತ 2047 ಗುರಿ ಸಾಧನೆ ಕುರಿತು ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು.
ಕೇವಲ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸೀಮಿತವಾಗದೆ, ಮುಂದಿನ ಹಲವು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ದೀರ್ಘಾವಧಿಯ ಯೋಜನೆಗಳನ್ನು ರೂಪಿಸುವಂತೆ ಪ್ರಧಾನಿ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಬದಲು ಪರಸ್ಪರ ಸಮನ್ವಯದೊಂದಿಗೆ ಕೆಲಸ ಮಾಡುವ ಅಗತ್ಯವನ್ನು ಒತ್ತಿಹೇಳಿದರು.
ಕೋವಿಡ್ ಸಾಂಕ್ರಾಮಿಕ ಹಾಗೂ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ ಮಾದರಿಯನ್ನು ಮುಂದುವರಿಸುವಂತೆ ಕರೆ ನೀಡಿದರು. ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಸಂವಹನ ನಡೆಸುವ ಮೂಲಕ ಪರಿಣಾಮಕಾರಿ ಹಾಗೂ ಬಲಿಷ್ಠ ಆಡಳಿತ ವ್ಯವಸ್ಥೆಯನ್ನು ರೂಪಿಸಬೇಕು ಎಂದರು.
ದತ್ತಾಂಶ ಬಳಕೆಗೆ ವಿಶೇಷ ಆದ್ಯತೆ
ದತ್ತಾಂಶವನ್ನು ರಾಷ್ಟ್ರೀಯ ಆಸ್ತಿಯಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ವಿವಿಧ ಇಲಾಖೆಗಳ ದತ್ತಾಂಶ ವೇದಿಕೆಗಳನ್ನು ಸಮನ್ವಯಗೊಳಿಸಿ, ನೀತಿ ನಿರೂಪಣೆ ಹಾಗೂ ಸಾರ್ವಜನಿಕ ಸೇವೆಗಳ ಸುಧಾರಣೆಗೆ ಪರಿಣಾಮಕಾರಿಯಾಗಿ ಬಳಸುವಂತೆ ಸೂಚಿಸಿದರು.
ಸರ್ಕಾರಿ ಸೇವೆಗಳನ್ನು ಮತ್ತಷ್ಟು ವೇಗವಾಗಿ ಮತ್ತು ಸುಲಭವಾಗಿ ಜನರಿಗೆ ತಲುಪಿಸಲು ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ಹೆಚ್ಚಿಸಬೇಕು. ಆದರೆ ಮಹತ್ವದ ಅಂತಿಮ ನಿರ್ಧಾರಗಳಲ್ಲಿ ಮಾನವ ಅನುಭವ, ವಿವೇಚನೆ ಹಾಗೂ ಜವಾಬ್ದಾರಿತನಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಯುವಜನರು, ವಿಶ್ವವಿದ್ಯಾಲಯಗಳೊಂದಿಗೆ ನಿರಂತರ ಸಂಪರ್ಕ
ಹೊಸ ಆಲೋಚನೆಗಳು ಮತ್ತು ನವೀನ ಪರಿಹಾರಗಳನ್ನು ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಲು ಸಚಿವಾಲಯಗಳು ವಿಶ್ವವಿದ್ಯಾಲಯಗಳು ಹಾಗೂ ಯುವಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು ಎಂದು ಪ್ರಧಾನಿ ಸೂಚಿಸಿದರು.
ಇದೇ ವೇಳೆ ರಕ್ಷಣಾ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲು ಆಧುನಿಕ ತರಬೇತಿ ಕೋರ್ಸ್‌ಗಳನ್ನು ರೂಪಿಸುವುದು, ಅಗತ್ಯ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವುದು ಸೇರಿದಂತೆ ಹಲವು ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಹಡಗು ನಿರ್ಮಾಣ ಕ್ಷೇತ್ರಕ್ಕೆ ‘ಮಿಷನ್ ಮೋಡ್’ ಒತ್ತು
ಹಡಗು ನಿರ್ಮಾಣ ಕ್ಷೇತ್ರಕ್ಕೆ ಈಗಾಗಲೇ ಮೂಲಸೌಕರ್ಯ ಸ್ಥಾನಮಾನ ನೀಡಲಾಗಿದ್ದು, ಕಡಲ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ‘ಮಿಷನ್ ಮೋಡ್’ನಲ್ಲಿ ವೇಗವಾಗಿ ಪೂರ್ಣಗೊಳಿಸುವಂತೆ ಪ್ರಧಾನಿ ಸೂಚಿಸಿದರು.
ಭಾರತವನ್ನು 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ಆಡಳಿತದಲ್ಲಿ ತಂತ್ರಜ್ಞಾನ, ದತ್ತಾಂಶ ಮತ್ತು ಇಲಾಖೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ಯಾವುದೇ ವಿಳಂಬವಿಲ್ಲದೆ ಸುಲಭವಾಗಿ ತಲುಪುವಂತೆ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಪ್ರಧಾನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

