ಉಡುಪಿಯಲ್ಲಿ ದುಶ್ಚಟ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಜಾಥಾ

0
4

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಯೋಜನೆಗಳು ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಬಡತನ ರೇಖೆಗಿಂತ ಮೇಲೇರಲು ಅವಕಾಶ ಕಲ್ಪಿಸಿವೆ. ಧರ್ಮಸ್ಥಳದ ಹಲವು ಯೋಜನೆಗಳು ರಾಜ್ಯಕ್ಕೆ ಮಾದರಿಯಾಗಿವೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಅ. 3ರಂದು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಉಡುಪಿ–ಕಾಪು ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಉಡುಪಿ ಘಟಕದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಮತ್ತು ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕೂಟದ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಸಾಮಾಜಿಕ ಹಾಗೂ ಅಭಿವೃದ್ಧಿ ಯೋಜನೆಗಳು ಗ್ರಾಮೀಣ ಜನರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿವೆ. ಸ್ವಾವಲಂಬನೆ, ಆರ್ಥಿಕ ಸಬಲೀಕರಣ ಹಾಗೂ ಸಾಮಾಜಿಕ ಜಾಗೃತಿಗೆ ಈ ಯೋಜನೆಗಳು ಸಹಕಾರಿಯಾಗಿವೆ ಎಂದು ಯಶ್‌ಪಾಲ್ ಸುವರ್ಣ ಹೇಳಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲಾಗುತ್ತಿರುವ ಮದ್ಯವರ್ಜನ ಶಿಬಿರ ದೇಶಕ್ಕೆ ಮಾದರಿಯಾಗಿದೆ. ಶಿಬಿರದ ಮೂಲಕ ಅನೇಕ ಕುಟುಂಬಗಳು ದುಶ್ಚಟದಿಂದ ಹೊರಬಂದು ಹೊಸ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ಸಂಘಟನಾ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ಪೂಜಾರಿ ಉಳ್ಳೂರು ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಗಿರಿಯಲ್ಲಿ ಜಾಥಾಕ್ಕೆ ಚಾಲನೆ

ಬ್ರಹ್ಮಗಿರಿ ವೃತ್ತದಲ್ಲಿ ನಡೆದ ಜನಜಾಗೃತಿ ಜಾಥಾಕ್ಕೆ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಕಾಪು ತಾಲೂಕು ಅಧ್ಯಕ್ಷ ಸತ್ಯೇಂದ್ರ ಪೈ, ನಿಕಟಪೂರ್ವ ಅಧ್ಯಕ್ಷರಾದ ಸತ್ಯಾನಂದ ನಾಯಕ್, ದಯಾನಂದ ಹೆಜಮಾಡಿ, ಪ್ರಮುಖರಾದ ಸುಂದರ ಜೆ. ಕಲ್ಮಾಡಿ, ರಾಘವೇಂದ್ರ ಶೆಟ್ಟಿ, ದಿನೇಶ್ ಆಚಾರ್ಯ, ಮಾಧವ ಬನ್ನಂಜೆ, ಕೃಷ್ಣ ಶೆಟ್ಟಿ, ಶಿವಕುಮಾರ್, ಉದಯ ಕುಮಾರ್ ಶೆಟ್ಟಿ, ಶಂಕರ ಕುಲಾಲ್, ಮಹಾಬಲ ಶೆಟ್ಟಿ, ಶಂಕರ ಕುಂದರ್, ನವೀನ್ ಜೈನ್, ಗೀತಾಂಜಲಿ ಸುವರ್ಣ, ಸುಜಾತಾ ಸುವರ್ಣ, ಕೇಶವ ಅಮೀನ್, ವಿಜಯ ಶೆಟ್ಟಿ, ಬಾಲಕೃಷ್ಣ, ಹರೀಶ್ ಕೋಟ್ಯಾನ್, ಮಹೇಶ್ ಕೋಟ್ಯಾನ್, ವಸಂತ ಶೆಟ್ಟಿ, ಸುರೇಂದ್ರ ನಾಯಕ್, ಪ್ರೇಮಾ, ಬಾಲಚಂದ್ರ, ಮಮತಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.