ಪುತ್ತಿಗೆ ಶ್ರೀ ಸೋಮನಾಥೇಶ್ವರ ಚಿಕ್ಕ ಮೇಳದ ಭಾಗವತ ಸುರೇಂದ್ರ ಪೈಗೆ ಗೌರವ ಸನ್ಮಾನ

0
33

ಪುತ್ತಿಗೆ : ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಪುತ್ತಿಗೆ ಶ್ರೀ ಸೋಮನಾಥೇಶ್ವರ ಹರಕೆ ಸೇವಾ ಚಿಕ್ಕ ಮೇಳದ ಭಾಗವತ, ಸಂಚಾಲಕ ಹಾಗೂ ಯಜಮಾನರಾದ ಭಾಗವತ ಶ್ರೀ ಸುರೇಂದ್ರ ಪೈ ಅವರಿಗೆ ಗೌರವ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಯಕ್ಷಗಾನದ ಇತಿಹಾಸದಲ್ಲೇ ಪ್ರಪ್ರಥಮವಾಗಿ 1990ರಲ್ಲಿ ಪಂಚಕೂಟ ಪದ್ಧತಿಯಲ್ಲಿ (ಐವರು ಕಲಾವಿದರು) ಚಿಕ್ಕ ಮೇಳವನ್ನು ಸ್ಥಾಪಿಸಿ, ಕಳೆದ 36 ವರ್ಷಗಳಿಂದ ನಿರಂತರವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಶ್ರೀ ಸುರೇಂದ್ರ ಪೈ ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಹಿರಿಯರಾಗಿದ್ದಾರೆ. ಕುಂದಾಪುರ ತಾಲೂಕಿನ ಗಂಗೊಳ್ಳಿಯ ಗೋವಿಂದರಾಯ ಪೈ ಹಾಗೂ ಕಲ್ಯಾಣಿ ಪೈ ದಂಪತಿಯ ಪುತ್ರರಾಗಿರುವ ಅವರು, ಕಳೆದ 56 ವರ್ಷಗಳಿಂದ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಕಿಶೋರ ವಯಸ್ಸಿನಿಂದಲೇ ಯಕ್ಷಗಾನ ಭಾಗವತಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಸುರೇಂದ್ರ ಪೈ ಅವರು, ಸ್ವಯಂ ಅಭ್ಯಾಸದ ಮೂಲಕ ಈ ಕಲೆ ಮೆರೆದಿದ್ದಾರೆ. ಪುತ್ತಿಗೆ ಬೆರ್ಕೆ ಶ್ರೀನಿವಾಸ ನಾಯ್ಕರ ಭಾಗವತಿಕೆಯಿಂದ ಪ್ರೇರಣೆಯಾದ ಅವರು, ಅವರನ್ನು ಮಾನಸಿಕ ಗುರುವೆಂದು ಒಪ್ಪಿಕೊಂಡು ಯಕ್ಷಗಾನ ಸೇವೆಯಲ್ಲಿ ತೊಡಗಿದ್ದಾರೆ. ಸಂಪಿಗೆ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಯನ್ನು ಮುನ್ನಡೆಸಿ, ಹಲವು ವರ್ಷಗಳ ಕಾಲ ಭಜನೆ ಹಾಗೂ ತಾಳಮದ್ದಲೆ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿದ್ದಾರೆ.

ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷ ಮೇ ತಿಂಗಳಲ್ಲಿ ಪ್ರಾರಂಭವಾಗುವ ಚಿಕ್ಕ ಮೇಳದ ತಿರುಗಾಟವು ಆರು ತಿಂಗಳುಗಳವರೆಗೆ ನಡೆಯುತ್ತಿದ್ದು, ದಿನಕ್ಕೆ ಸರಾಸರಿ 25 ಮನೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ಮೂಲಕ ಭಕ್ತಿ ಹಾಗೂ ಪೌರಾಣಿಕ ಲೋಕವನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ರಾಮಾಯಣ, ಮಹಾಭಾರತ, ಭಾಗವತ ಹಾಗೂ ಶಿವಪುರಾಣದ ಆಯ್ದ ಕಥಾನಕಗಳನ್ನು ಸೀಮಿತ ಅವಧಿಯಲ್ಲಿ ಪ್ರದರ್ಶಿಸುವ ವಿಶೇಷತೆ ಈ ಮೇಳಕ್ಕಿದೆ.

ಚಿಕ್ಕ ಮೇಳದ ಸಂಪೂರ್ಣ ವೆಚ್ಚವನ್ನು ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ನಿರ್ವಹಿಸುತ್ತಿದ್ದು, ಕಲಾವಿದರಿಗೆ ಇದು ವರದಾನವಾಗಿದೆ. ಮೂರು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವೇಷಭೂಷಣ, ಬೆಳ್ಳಿ ಕಿರೀಟ, ದೇವರ ಪ್ರಭಾವಳಿ ಮುಂತಾದ ಸಾಮಗ್ರಿಗಳನ್ನು ದಾನಿಗಳ ಮೂಲಕ ಒದಗಿಸುವಲ್ಲಿ ಸುರೇಂದ್ರ ಪೈ ಅವರ ಪಾತ್ರ ಮಹತ್ವದಾಗಿದೆ.

ಇದುವರೆಗೆ ನಾಡಿನ ಹಲವು ಸಂಘ ಸಂಸ್ಥೆಗಳಿಂದ 15ಕ್ಕೂ ಹೆಚ್ಚು ಗೌರವ ಸನ್ಮಾನಗಳನ್ನು ಪಡೆದಿರುವ ಸುರೇಂದ್ರ ಪೈ ಅವರ ಕುರಿತು ಉದಯವಾಣಿ, ವಿಜಯವಾಣಿ, ತರಂಗ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ವ್ಯಕ್ತಿಚಿತ್ರಗಳು ಪ್ರಕಟವಾಗಿವೆ. ಧರ್ಮಪತ್ನಿ ಶ್ರೀಮತಿ ಸುರೇಖಾ ಪೈ ಹಾಗೂ ಪುತ್ರಿ ಶ್ರೀನಿಧಿ ಪೈ ಅವರೊಂದಿಗೆ ಗೌರವಯುತ ಜೀವನ ನಡೆಸುತ್ತಿದ್ದಾರೆ.

ಅವರ ಸಮಾಜ ಸೇವೆ ಹಾಗೂ ಕಲಾ ಸೇವೆಯನ್ನು ಗುರುತಿಸಿ, ದಿನಾಂಕ 11-01-2026 ಭಾನುವಾರ ಶ್ರೀರಾಮ ಮಂದಿರ ಕೆಸರುಗದ್ದೆಯಲ್ಲಿ ನಡೆಯುವ 14ನೇ ವರ್ಷದ GSB ಸ್ಪರ್ಧಾ ಕಾರ್ಯಕ್ರಮದ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು.

ಎಂ. ರಾಘವೇಂದ್ರ ಭಂಡಾರ್ಕರ್
ಮೂಡುಬಿದಿರೆ

LEAVE A REPLY

Please enter your comment!
Please enter your name here