ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗದ ವಾರ್ಷಿಕೋತ್ಸವ ಅಕ್ಷರ ಹಬ್ಬಕ್ಕೆ ಕ್ಷಣಗಣನೆ

0
73

ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಕಳೆದ ನಾಲ್ಕು ವರ್ಷಗಳಿಂದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮ ಸಾಹಿತ್ಯ ಸಂಭ್ರಮದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ಭಾಗಿಯಾಗಿರುವ ಸಂಸ್ಥೆ ಪುತ್ತೂರಿನ ‘ಚಿಗುರೆಲೆ ಸಾಹಿತ್ಯ ಬಳಗ’ ಇದರ ವಾರ್ಷಿಕೋತ್ಸವ, ಐದು ಕೃತಿಗಳ ಲೋಕಾರ್ಪಣೆ ಹಾಗೂ ‘ಸದ್ಭಾವ ಚಿಗುರು’ ಕವಿಗೋಷ್ಠಿಯು ಇದೇ ದಿನಾಂಕ 12.04.2026 ಭಾನುವಾರದಂದು ಪುತ್ತೂರಿನ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನಡೆಯಲಿದೆ.

​ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮವು ಬೆಳಿಗ್ಗೆ 9.30ಕ್ಕೆ ಆರಂಭಗೊಂಡು ಅಪರಾಹ್ನ 3.00ರವರೆಗೆ ಜರುಗಲಿದೆ.
​ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕರಾದ ಗೋಕುಲ್ ನಾಥ್ ಪಿ.ವಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಸಮಾರಂಭದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾದ ಶಕುಂತಲಾ ಟಿ ಶೆಟ್ಟಿ, ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಮೂಡಿಗೆರೆ ಘಟಕದ ರಾಜ್ಯಾಧ್ಯಕ್ಷರಾದ ಎಂ ಎಸ್ ನಾಗರಾಜ್ ಮೂಡಿಗೆರೆ,ಧರ್ಮಸ್ಥಳ ಜನಜಾಗೃತಿ ವೇದಿಕೆ ಅಳಿಕೆ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಅಳಿಕೆ, ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ, ನಿವೃತ್ತ ಉಪನ್ಯಾಸಕರಾದ ಮಹಾಲಿಂಗೇಶ್ವರ ಭಟ್ ಮಧುವನ, ಕನ್ನಡ ತುಳು ಸಾಹಿತಿ ಶಶಿಕಲಾ ವರ್ಕಾಡಿ, ಪುತ್ತೂರಿನ ಉಪ ತಹಸೀಲ್ದಾರ್ ಮತ್ತು ಯುವ ಸಾಹಿತಿ ಸುಲೋಚನಾ ಪಿ ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕೃತಿ ಲೋಕಾರ್ಪಣೆ ಈ ಶುಭ ಸಂದರ್ಭದಲ್ಲಿ ಸುಂದರ ಸಾರ್ಯರವರ ಚೊಚ್ಚಲ ಕವನ ಸಂಕಲನ ಭಾವನೆಗಳ ಬೆನ್ನೇರಿ, ಅಶ್ವಿಜ ಶ್ರೀಧರ್ ಬೆಳ್ತಂಗಡಿಯವರ ಪ್ರಕೃತಿ ಕಾಂತಿ, ಪ್ರಿಯಾ ಎಂ ಸುಳ್ಯರವರ ಅಹನಿ ಪ್ರಿಯಾ, ಶ್ರೀಕಲಾ ಕಾರಂತ್ ಅಳಿಕೆಯವರ ವರ್ಣ ಚುಕ್ಕಿ,ಚಿಗುರೆಲೆ ಸಾಹಿತ್ಯ ಬಳಗದ ಸಂಪಾದಿತ ಕೃತಿ ಸದ್ಭಾವ ಚಿಗುರು ಕೃತಿಗಳು ಲೋಕಾರ್ಪಣೆಗೊಳ್ಳಲಿದ್ದು, ನಾರಾಯಣ ರೈ ಕುಕ್ಕುವಳ್ಳಿ, ಶಕುಂತಲಾ ಟಿ ಶೆಟ್ಟಿ, ಪುತ್ತೂರು ಉಮೇಶ್ ನಾಯಕ್,ಶ್ರೀ ಮಹಾಲಿಂಗೇಶ್ವರ ಭಟ್ ಕೆ., ಎಂ.ಎಸ್. ನಾಗರಾಜ್ ಮುಂತಾದ ಗಣ್ಯರು ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ.

ಸನ್ಮಾನ ಮತ್ತು ಗೌರವ ಶೈಕ್ಷಣಿಕ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮೇಶ್ ಉಳಯ, ಪತ್ರಿಕೋದ್ಯಮ ಕ್ಷೇತ್ರದ ಉದಯ ಕುಮಾರ್ ಯು.ಎಲ್., ಸಾಹಿತ್ಯ ಕ್ಷೇತ್ರದ ಶ್ರೀಕಲಾ ಕಾರಂತ್ ಅಳಿಕೆ ಹಾಗೂ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದ ಎಂ.ಎಸ್. ನಾಗರಾಜ್ ಮೂಡಿಗೆರೆ ಅವರಿಗೆ ‘ಚಿಗುರೆಲೆ ಗೌರವ ಸನ್ಮಾನ’ ನೀಡಿ ಗೌರವಿಸಲಾಗುವುದು.

‘ಸದ್ಭಾವ ಚಿಗುರು’ ಕವನ ಸಂಕಲನದ 66 ಕವಿಗಳಿಗೆ ವಿಶೇಷ ಗೌರವಾರ್ಪಣೆ ನಡೆಯಲಿದ್ದು, ವೈವಿಧ್ಯಮಯ ಸದ್ಭಾವ ಚಿಗುರು ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ವ. ಉಮೇಶ್ ಕಾರಂತ್ ಮಂಗಳೂರು, ಎಂ. ಪಿ ಅಬೂಬಕ್ಕರ್ ಮುರ, ಆನಂದ ರೈ ಅಡ್ಕಸ್ಥಳ, ಸತ್ಯಲತಾ ಸಿದ್ಧಮೂಲೆ ನ್ಯಾನ್ಸಿ ನೆಲ್ಯಾಡಿ ಅಲ್ಲದೇ ಪುಟಾಣಿ ತಶ್ವಿ ಶಾಂಭವಿ ಭಾಗವಹಿಸಲಿರುವರು.

ಕಾರ್ಯಕ್ರಮದಲ್ಲಿ ಚಿಗುರೆಲೆ ಬಳಗದ ಅಧ್ಯಕ್ಷರಾದ ಚಂದ್ರಮೌಳಿ ಕಡಂದೇಲು ಉಪಸ್ಥಿತರಿರಲಿದ್ದಾರೆ. ಸಾಹಿತ್ಯಾಸಕ್ತರು ಹಾಗೂ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಕ್ಷರ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಕಾರ್ಯಕ್ರಮ ಸಂಯೋಜಕರಾದ ನಾರಾಯಣ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here