Saturday, June 14, 2025
HomeUncategorizedರಾಜೇಂದ್ರ ಕೇದಿಗೆ ಅವರಿಗೆ ಪ್ರತಿಷ್ಠಿತ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ

ರಾಜೇಂದ್ರ ಕೇದಿಗೆ ಅವರಿಗೆ ಪ್ರತಿಷ್ಠಿತ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಲಾವಿರಾದ ಶ್ರೀ ರಾಜೇಂದ್ರ ಕೇದಿಗೆ ಅವರು ಮೇ 23 ಶುಕ್ರವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ರಾಜ್ಯದ ಅತ್ಯಂತ ಪ್ರತಿಷ್ಠಿತ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದರು.  ಈ ಪ್ರಶಸ್ತಿಯು ಅವರ ಅಚಲ ಸಮರ್ಪಣೆ, ಸೃಜನಶೀಲ ದೃಷ್ಟಿಕೋನ ಮತ್ತು ಕಲಾ ಜಗತ್ತಿಗೆ ನೀಡಿದ ದೀರ್ಘಕಾಲೀನ ಕೊಡುಗೆಗಳಿಗೆ ಸಂದ ಗೌರವವಾಗಿದೆ.

ಕಳೆದ ಹಲವಾರು ದಶಕಗಳಲ್ಲಿ, ಅವರು ಚಿತ್ರಕಲೆ, ಕ್ಯುರೇಟೋರಿಯಲ್ ಕೆಲಸ, ಕಲಾ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಕ್ಷೇತ್ರಗಳಲ್ಲಿ ಗಮನಾರ್ಹ ಛಾಪು ಮೂಡಿಸಿದ್ದಾರೆ. “ಬೆಳಕಿನ ಕಡೆಗೆ” ಮತ್ತು “ಲಾಸ್ಟ್ ಸಪ್ಪರ್” ನಂತಹ ಅವರ ಅಮೂರ್ತ ಸರಣಿಗಳ ಮೂಲಕ, ಅವರು ಸಮಕಾಲೀನ ಕಲೆಯಲ್ಲಿ ವಿಶಿಷ್ಟ ವರ್ಣ ಚಿತ್ರಗಳನ್ನು ಮಾಡಿದ್ದಾರೆ.  ಮಂಗಳೂರು ನಗರದ ಕಲಾರಾಜೇಂದ್ರ ಕೇದಿಗೆ ಅವರು 25 ಕ್ಕೂ ಹೆಚ್ಚು ಕಲಾ ಪ್ರದರ್ಶನಗಳನ್ನು ನಡೆಸಿದ ಸ್ವ-ಚಿಂತನಾ ವರ್ಣಚಿತ್ರಕಾರರು.

ರಾಜೇಂದ್ರ ಕೇದಿಗೆ ಅವರು ಕರಾವಳಿ ಕರ್ನಾಟಕದ 34 ಮರೆತುಹೋದ ಕಲಾವಿದರ ಜೀವನ ಮತ್ತು ಕೃತಿಗಳನ್ನು ಬೆಳಕಿಗೆ ತರುವ “ಮೋಡೆಪು” ಪುಸ್ತಕವನ್ನು ಸಹ-ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಈ ಸಾಧನೆಯು ಕೂಡಾ ಅವರಿಗೆ ಅಕಾಡೆಮಿಯಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಲು ಸಹಾಯಕವಾಗಿದೆ.

ರಾಜೇಂದ್ರ ಕೇದಿಗೆ ಇವರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ವಲಯದ ಸಂಚಾಲಕ ಹಾಗೂ ಸದಸ್ಯರಾಗಿ ಎರಡು ಅವಧಿಗೆ ಆಯ್ಕೆಯಾಗಿ ಸಂಯೋಜಕರಾಗಿ ಸೇವೆ ಮಾಡಿದ್ದಾರೆ.  ನೂರಾರು ಯುವ ಕಲಾವಿದರಿಗೆ ಈ ಪ್ರದೇಶದಲ್ಲಿ ಕಲೆಯ ಬಗ್ಗೆ ಆಸಕ್ತಿಯನ್ನು ಕ್ರೋಢೀಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಹಾಗೂ ಕಲಾವಿದರ ವರ್ಣಚಿತ್ರ ಪ್ರದರ್ಶನಕ್ಕೆ ಸಹಕಾರ ಮಾಡಿದ್ದಾರೆ. ಇವರು ಇಂಟಾಚ್ ಮಂಗಳೂರು ಅಧ್ಯಾಯ ಆರ್ಟ್ ಕೆನರಾ ಟ್ರಸ್ಟ್ ಹಾಗೂ ಆರ್ಟಿಸ್ಟ್ ಫೋರಂ ಇದರ ಸಕ್ರಿಯ ಸದಸ್ಯರು. ಇವರು ಎಸ್ -ಕ್ಯೂಬ್   ಆರ್ಟ್ ಗ್ಯಾಲರಿ ಎಂಬ ಸಂಸ್ಥೆಯನ್ನು ಮಂಗಳೂರಿನಲ್ಲಿ ನಡೆಸಿಕೊಂಡು ಬಂದಿರುತ್ತಾರೆ ಜೊತೆಗೆ ಸಂಘ-ಸಂಸ್ಥೆಗಳ ಸಹಭಾಗಿತ್ವದ ಮೂಲಕ ಹಲವಾರು ಕಲಾ ಚಟುವಟಿಕೆಗಳನ್ನು ನಡೆಸಿರುತ್ತಾರೆ ಕೆಲಸ ಮಾಡಿರುತ್ತಾರೆ.

ಆರ್ಟ್ ಕೆನರಾ ಟ್ರಸ್ಟ್ ಮತ್ತು ಎಸ್-ಕ್ಯೂಬ್ ಆರ್ಟ್ ಗ್ಯಾಲರಿಯಂತಹ ಉಪಕ್ರಮಗಳ ಮೂಲಕ, ಅವರು ಉದಯೋನ್ಮುಖ ಕಲಾವಿದರಿಗೆ ವೇದಿಕೆಗಳನ್ನು ಸೃಷ್ಟಿಸಿದ್ದಾರೆ. ಮಂಗಳೂರಿನಲ್ಲಿ “ಚಿತ್ರ ಚಾವಡಿ” ಮತ್ತು “ಚಿತ್ರ ಸಂತೆ” ನಂತಹ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಅವರ ಪ್ರಯತ್ನಗಳು ಕಲೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವರು ಕೇವಲ ಕಲಾವಿದರಲ್ಲ, ಚಿಂತಕರು, ಮಾರ್ಗದರ್ಶಕರು ಮತ್ತು ಕಲೆ ಮತ್ತು ಸಂಸ್ಕೃತಿಯ ನಿಜವಾದ ರಾಯಭಾರಿ ಕೂಡ.

ಇವರ ಹುಟ್ಟೂರು ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮವಾಗಿದ್ದು. ತಂದೆ-ತಾಯಿಯವರಾದ  ಕೇದಿಗೆ ಭಾಸ್ಕರ್ ರಾವ್ ಮತ್ತು ಲಕ್ಷ್ಮೀ.  ಬಿ. ರಾವ್. ದಂಪತಿಗಳು ಕೃಷಿಕರಾಗಿದು ಕೊಂಡು ಸಾಹಿತ್ಯ, ಸಂಗೀತ, ನಾಟಕ ಮತ್ತು ಚಿತ್ರಕಲೆಯಲ್ಲಿ ಅಭಿರುಚಿ ಇದ್ದು ಆ ನಿಟ್ಟಿನಲ್ಲಿ ಕೆಲಸ ಮಾಡಿದವರಾಗಿರುತ್ತಾರೆ.

ರಾಜೇಂದ್ರ ಕೇದಿಗೆ ಯವರು ಒಬ್ಬ ವೃತ್ತಿಪರ ಕಲಾವಿದರು ಹಾಗೇನೆ ಕವಿಯಾಗಿಯೂ ಗುರುತಿಸಿಕೊಂಡು ಹೆಚ್ಚಾಗಿ ಕನ್ನಡ ಹಾಗೂ ತುಳುವಿನಲ್ಲಿ ಬರೆಯುತ್ತಿದ್ದು ಇವರ ಮಾತೃ ಭಾಷೆಯು ತುಳು ಆಗಿದೆ. ತುಳು ಸಾಹಿತ್ಯ ಅಕಾಡೆಮಿ ವಿಶ್ವ ತುಳು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹೀಗೆ ಹಲವೆಡೆ ಭಾಗವಹಿಸುತಿದ್ದರು. ಕಾಂಚನಗಂಗಾ ಪ್ರತಿಷ್ಠಾನ ಬಹರೈನ್ ಎಂಬ ಸಂಸ್ಥೆಯು ಹಮ್ಮಿಕೊಂಡ ಜಾಗತಿಕ ಮಟ್ಟದ ತುಳು ಕಾವ್ಯ ಸ್ಪರ್ಧೆಯಲ್ಲಿ “ಕರಿಯಿನ  ನೆಂಪುಲು “ಎಂಬ ಕವಿತೆಯು ಕಾವ್ಯಶ್ರೀ ಪ್ರಶಸ್ತಿಯನ್ನು ಪಡೆದಿರುತ್ತದೆ. ಅಲ್ಲದೆ ಜಿಲ್ಲಾ ಸಾಹಿತ್ಯ ಪರಿಷತ್ತು ನಡೆಸಿದ 19 ನೇ ಸಾಹಿತ್ಯ ಸಮ್ಮೇಳನ ಪೊಳಲಿ 2014 ಇದರ ಕವನ ಸ್ಪರ್ಧೆಯ ಸಾರ್ವಜನಿಕ ವಿಭಾಗದಲ್ಲಿ ದ್ವಿತೀಯ ಸ್ಥಾನವು ಬಂದಿರುತ್ತದೆ. ಕಲಾ ಬದುಕಿನಲ್ಲಿ ಇವರ ಕಲಾಕೃತಿಗಳು ವಿಷಯಧಾರಿತವಾಗಿದ್ದು ವಿವಿಧ ಮಾಧ್ಯಮಗಳ ಮೂಲಕ ಪ್ರಯೋಗಾತ್ಮಕವಾಗಿರುತ್ತದೆ ಚಿತ್ರ ಕಲಾವಿದರಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸಿರುತ್ತಾರೆ.

ಕಲಾ ಕ್ಷೇತ್ರದಲ್ಲಿ ನಿಮ್ಮ ವಿಶಿಷ್ಟ ಕೊಡುಗೆಗಳು ಕೇವಲ ನಿಮ್ಮ ವೈಯಕ್ತಿಕ ಸಾಧನೆಗೆ ಮಾತ್ರವಲ್ಲ, ನಮ್ಮ ಭಾಗದ ಗೌರವವನ್ನೂ ಹೆಚ್ಚಿಸಿವೆ. ನಿಮ್ಮ ಈ ಕಲಾ ಸಾಧನೆ ನನಗೆ ವೈಯಕ್ತಿಕವಾಗಿ ಹೆಮ್ಮೆಯ ವಿಷಯವಾಗಿದೆ. ಭವಿಷ್ಯದಲ್ಲಿಯೂ ನೀವು ಇನ್ನೂ ಹೆಚ್ಚಿನ ಸಾಧನೆಯ ಹೆಜ್ಜೆಯಗುರುತು ಸದ್ದು ಮಾಡಲಿ, ನಿಮ್ಮ ಸೃಜನಶೀಲತಯೇ ಮುಂದಿನ ಸಾಧನೆಗಳಿಗೆ ಸೋಪಾನವಾಗಲಿ.

ಈ ಅರ್ಹ ಗೌರವಕ್ಕಾಗಿ ನಾವು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಮತ್ತು ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಮುಂದುವರಿಯಲಿ ಇನ್ನೂ ಅನೇಕ ಪ್ರಶಸ್ತಿಗಳನ್ನು ನಿಮ್ಮನ್ನು ಅರಸಿಬರಲಿ ಎಂದು ಹಾರೈಸುತ್ತೇವೆ.

RELATED ARTICLES
- Advertisment -
Google search engine

Most Popular