ರಾಮಕೃಷ್ಣ ಮಿಷನ್, ಮಂಗಳೂರು – 75ನೇ ಅಮೃತ ಮಹೋತ್ಸವದ ಅಂಗವಾಗಿ ತಾಳಮದ್ದಳೆ ಹಾಗೂ ವಿವೇಕ ಚಿಂತನ ಕಾರ್ಯಕ್ರಮ

0
45

ಮಂಗಳೂರು: ಭಗವಾನ್ ಶ್ರೀರಾಮಕೃಷ್ಣ ಪರಮಹಂಸ, ಶ್ರೀ ಶ್ರೀ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಪಾವನ ಸಂದೇಶಗಳಿಂದ ಪ್ರೇರಿತವಾಗಿರುವ ರಾಮಕೃಷ್ಣ ಮಿಷನ್, ಮಂಗಳೂರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತನ್ನ 75ನೇ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಈ ಅಮೃತ ವರ್ಷಾಚರಣೆಯ ಅಂಗವಾಗಿ ಭಕ್ತಿ, ಸಂಸ್ಕೃತಿ ಮತ್ತು ಚಿಂತನೆಯ ಸಂಗಮವಾಗಿ ಎರಡು ವಿಶೇಷ ಕಾರ್ಯಕ್ರಮಗಳನ್ನು ದಿನಾಂಕ 11 ಜನವರಿ 2026, ಭಾನುವಾರ ರಾಮಕೃಷ್ಣ ಮಠ, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

ಸ್ವಾಮಿ ವಿವೇಕಾನಂದರ ತ್ಯಾಗಮಯ ಜೀವನ ಹಾಗೂ ವೀರ ಸಂನ್ಯಾಸ ಪರಂಪರೆಯನ್ನು ಆಧರಿಸಿದ “ತಾಳಮದ್ದಳೆ – ವೀರಸಂನ್ಯಾಸಿ” ಎಂಬ ಸಾಂಸ್ಕೃತಿಕ ಕಾರ್ಯಕ್ರಮವು ಮಧ್ಯಾಹ್ನ 1.00 ರಿಂದ 4.00 ಗಂಟೆಯವರೆಗೆ ರಾಮಕೃಷ್ಣ ಮಠದ ಅಮೃತಭವನ ಸಭಾಂಗಣದಲ್ಲಿ ನಡೆಯಲಿದೆ. ಈ ತಾಳಮದ್ದಳೆಯನ್ನು ಹಿಮ್ಮೇಳದಲ್ಲಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಮತ್ತು ಬಳಗ ಹಾಗೂ ಮುಮ್ಮೇಳದಲ್ಲಿ ಶ್ರೀ ವಾಸುದೇವರಂಗ ಭಟ್, ಪವನ್ ಕಿರಣ್ ಕೆರೆ, ಗಣೇಶ್ ಕನ್ನಡಿಕಟ್ಟೆ , ಹಿರಣ್ಯ ವೆಂಕಟೇಶ್ವರ ಭಟ್ ಮತ್ತು ಸದಾಶಿವ ಆಳ್ವ ತಲಪಾಡಿ ಅವರು ನಿರ್ವಹಿಸಲಿದ್ದಾರೆ.

ಇದಾದ ಬಳಿಕ ಸಂಜೆ 5.00 ರಿಂದ 7.30 ಗಂಟೆಯವರೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ “ವಿವೇಕ ಚಿಂತನ” ಎಂಬ ವಿಶೇಷ ಚಿಂತನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಖ್ಯಾತ ಲೇಖಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (ಬೆಂಗಳೂರು) ಅವರು “ವೀರ ಸಂನ್ಯಾಸಿ ವಿವೇಕಾನಂದ – ಯುಗಪ್ರೇರಕ ಸಂದೇಶ” ವಿಷಯದ ಮೇಲೆ ಪ್ರೇರಣಾದಾಯಕ ಉಪನ್ಯಾಸ ಹಾಗೂ ಸಂವಾದವನ್ನು ನಡೆಸಿಕೊಡಲಿದ್ದಾರೆ.

ಸಂಜೆ 5.00 ರಿಂದ 5.30 ರವರೆಗೆ ನಡೆಯುವ ಉದ್ಘಾಟನಾ ಹಾಗೂ ಸಭಾ ಕಾರ್ಯಕ್ರಮವನ್ನು ಕ್ಯಾಂಪ್ಕೋ, ಮಂಗಳೂರು ಇದರ ಅಧ್ಯಕ್ಷರಾದ ಸತೀಶ್ಚಂದ್ರ ಎಸ್.ಆರ್. ಅವರು ಉದ್ಘಾಟಿಸಲಿದ್ದು, ರಾಮಕೃಷ್ಣ ಮಿಷನ್, ಮಂಗಳೂರು ಕಾರ್ಯದರ್ಶಿ ಸ್ವಾಮಿಜಿ ತಕಾಮಾನಂದಜಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ರಾಮಕೃಷ್ಣ ಮಿಷನ್, ಮಂಗಳೂರು ತನ್ನ ಅಮೃತ ವರ್ಷಾಚರಣೆಯ ಅಂಗವಾಗಿ ಆಯೋಜಿಸಿರುವ ಈ ಸಾಂಸ್ಕೃತಿಕ–ಚಿಂತನ ಕಾರ್ಯಕ್ರಮಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶ ಹೊಂದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಿಷನ್ ಮನವಿ ಮಾಡಿದೆ.

LEAVE A REPLY

Please enter your comment!
Please enter your name here