ನಗರ ಪ್ರದೇಶದ ಸಂಚಾರದ ಸುಧಾರಣೆ ಮತ್ತು ಗಿಗ್ ಕೆಲಸಗಾರರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಗತಿಶೀಲ ನೀತಿಗಳನ್ನು ಅಳವಡಿಕೆಯಲ್ಲಿ ಕರ್ನಾಟಕ ಸರ್ಕಾರವು ಮುಂಚೂಣಿಯಲ್ಲಿದೆ. ಸುಸ್ಥಿರ ಮತ್ತು ಸಮಗ್ರ ಸಂಚಾರವನ್ನು ನಿರ್ಮಿಸುವ ಕುರಿತು ಅದರ ಬದ್ಧತೆ ಶ್ಲಾಘನೀಯವಾಗಿದೆ ಮತ್ತು ದೇಶೀಯ ಬ್ರ್ಯಾಂಡ್ ಆಗಿ ನಾವು ಈ ಪ್ರಯತ್ನವನ್ನು ಶ್ಲಾಘಿಸುತ್ತೇವೆ.
ರಾಜ್ಯದಲ್ಲಿ ಮುಂದಿನ ಆರು ವಾರಗಳ ಕಾಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿರುವ ಕರ್ನಾಟಕ ಹೈಕೋರ್ಟ್, ಈ ಅವಧಿಯಲ್ಲಿ ಯಾವುದೇ ವ್ಯತಿರಿಕ್ತ ಕ್ರಮಗಳನ್ನು ಕೈಗೊಳ್ಳದಂತೆ ರಾಜ್ಯ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದೆ. ಈ ನಿರ್ಧಾರವು ಯಾವುದೇ ತಕ್ಷಣದ ಅಡೆತಡೆಯಿಲ್ಲದೆ ಅಗತ್ಯ ಸಂಚಾರ ಸೇವೆಗಳು ಮುಂದುವರಿಯಲಿವೆ ಎಂದು ನಮ್ಮ ಗ್ರಾಹಕರು ಮತ್ತು ಕ್ಯಾಪ್ಟನ್ ಗಳಿಗೆ ಖಾತರಿಯನ್ನು ಒದಗಿಸಿದೆ.
ಕರ್ನಾಟಕ ಮೂಲದ ಕಂಪನಿಯಾಗಿರುವ ರ‍್ಯಾಪಿಡೋ ರಾಜ್ಯದಲ್ಲಿ ಕೈಗೆಟಕುವ ಮತ್ತು ಸಮರ್ಥ ಸಂಚಾರ ಒದಗಿಸುವ ಕಂಪನಿಯಾಗಿದೆ. ಪ್ರತಿ ತಿಂಗಳು ನಮ್ಮ ಬೈಕ್ ಟ್ಯಾಕ್ಸಿಗಳು ಕರ್ನಾಟಕದಲ್ಲಿ ಸುಮಾರು 50 ಲಕ್ಷ ರೈಡ್ ಗಳನ್ನು ಒದಗಿಸುತ್ತದೆ. ಈ ಮೂಲಕ ಲಕ್ಷಾಂತರ ಜನರಿಗೆ ತಡೆರಹಿತ ಸಂಚಾರ ಆಯ್ಕೆಗಳನ್ನು ಒದಗಿಸುತ್ತದೆ. ಅದೇ ಸಮಯಲ್ಲಿ ರಾಜ್ಯದಲ್ಲಿ 1.5 ಲಕ್ಷ ಕ್ಯಾಪ್ಟನ್ ಗಳು ತಮ್ಮ ಜೀವನೋಪಾಯಕ್ಕಾಗಿ ನಮ್ಮ ವೇದಿಕೆಯನ್ನು ಅವಲಂಬಿಸಿದ್ದು, ವಿಶಾಲ ಗಿಗ್ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆಯನ್ನು ನೀಡುತ್ತಿವೆ.
ಬೈಕ್ ಸಾರಿಗೆಯು ನಗರ ಸಂಚಾರದ ಅವಿಭಾಜ್ಯ ಅಂಗವಾಗಿದೆ ಮತ್ತು ಇದು ಪ್ರಮುಖವಾದ ಮೊದಲ ಮತ್ತು ಕೊನೆಯ ಗಮ್ಯವನ್ನು ಸಂಪರ್ಕಿಸುವ ಕೆಲಸವನ್ನು ಮಾಡುತ್ತಾ ಇದೆ ಎಂದು ನಾವು ಬಲವಾಗಿ ನಂಬುತ್ತೇವೆ. ಜೊತೆಗೆ ತಮ್ಮ ಜೀವನೋಪಾಯಕ್ಕಾಗಿ ಬೈಕ್ ಟ್ಯಾಕ್ಸಿಗಳ ಮೇಲೆ ಅವಲಂಬಿಸಿರುವ ಗಿಗ್ ಕಾರ್ಮಿಕರ ಧ್ವನಿಗಳನ್ನು ಪರಿಗಣಿಸಲಾಗುತ್ತದೆ ಎಂದು ನಂಬುತ್ತೇವೆ.
ನ್ಯಾಯಾಲಯದ ಆದೇಶವನ್ನು ರ‍್ಯಾಪಿಡೋ ವಿಸ್ತೃತವಾಗಿ ಪರಿಶೀಲಿಸುತ್ತಿದೆ ಮತ್ತು ಗ್ರಾಹಕರಿಗೆ ತಡೆರಹಿತ ಸೇವೆಯನ್ನು ಒದಗಿಸಲು ಕಾನೂನಾತ್ಮಕ ಪರಿಹಾರದ ಕುರಿತು ಅಧ್ಯಯನ ಮಾಡುತ್ತಿದೆ. ಎಲ್ಲಾ ಪಾಲುದಾರರಿಗೆ ಲಾಭದಾಯಕವಾಗುವಂತಹ ಸುಸ್ಥಿರ ಸಂಚಾರ ಪರಿಸರವನ್ನು ಒದಗಿಸಲು ಜನಪ್ರತಿನಿಧಿಗಳೊಂದಿಗೆ ನಾವು ಕೈಜೋಡಿಸಲು ಬದ್ಧರಾಗಿರುತ್ತೇವೆ.
ನಮ್ಮ ಆದ್ಯತೆಗಳು ಸ್ಪಷ್ಟವಾಗಿವೆ – ವಿಶ್ವಾಸಾರ್ಹ, ಕೈಗೆಟಕುವ ಮತ್ತು ತಡೆರಹಿತ ಸಾರಿಗೆ ಪರಿಹಾರಗಳನ್ನು ಒದಗಿಸುವುದು ಮತ್ತು ಈ ವೇದಿಕೆಯನ್ನು ಅವಲಂಬಿಸಿರುವ ಸಾವಿರಾರು ಕ್ಯಾಪ್ಟನ್ ಗಳ ಜೀವನೋಪಾಯವನ್ನು ಸಂರಕ್ಷಿಸುವುದು.