ಸೇವೆಯ ಯಜ್ಞದಲ್ಲಿ ಆರ್‌ಸಿಬಿ ಕ್ಲಬ್ ಬದಿಯಡ್ಕ

0
12

ಶಬರಿಗಿರಿ ಶ್ರೀ ಅಯ್ಯಪ್ಪ ಮಂದಿರಕ್ಕೆ ಭಕ್ತಾದಿಗಳ ಅನುಕೂಲಕ್ಕಾಗಿ ಸ್ನಾನಗೃಹ ಹಾಗೂ ಶೌಚಾಲಯ ನಿರ್ಮಾಣ; ಟ್ರಸ್ಟಿಗಳಿಗೆ ಕೀಲಿ ಹಸ್ತಾಂತರ

ಬದಿಯಡ್ಕ : ಸೇವೆಯೇ ಪರಮ ಧರ್ಮ ಎಂಬ ಆಶಯದೊಂದಿಗೆ ಬದಿಯಡ್ಕ ಆರ್‌ಸಿಬಿ ಕ್ಲಬ್ಬಿನ ವತಿಯಿಂದ ಬದಿಯಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಬರಿಗಿರಿ ಶ್ರೀ ಅಯ್ಯಪ್ಪ ಮಂದಿರದ ಪುನಃಪ್ರತಿಷ್ಠಾ ಕಲೋತ್ಸವದ ಪೂರ್ವಭಾವಿಯಾಗಿ ಭಕ್ತಾದಿಗಳ ಅನುಕೂಲಕ್ಕಾಗಿ ಸುಸಜ್ಜಿತ ಸ್ನಾನಗೃಹ ಹಾಗೂ ಶೌಚಾಲಯ ಕೊಠಡಿಗಳನ್ನು ನಿರ್ಮಿಸಿ ಸೇವಾರೂಪವಾಗಿ ಮಂದಿರಕ್ಕೆ ಸಮರ್ಪಿಸಲಾಯಿತು.

ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಕೀಲಿ ಕೈಯನ್ನು ಶ್ರೀ ಅಯ್ಯಪ್ಪ ಮಂದಿರದ ಟ್ರಸ್ಟಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್‌ನ ಅಧ್ಯಕ್ಷ ನರೇಂದ್ರ ಬಿ. ಅವರು, ಆರ್‌ಸಿಬಿ ಕ್ಲಬ್ಬಿನ ಈ ಸೇವಾ ಕಾರ್ಯವನ್ನು ಶ್ಲಾಘಿಸಿ, ಕ್ಲಬ್ಬಿನ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿಗೆ ಮಂದಿರದ ಟ್ರಸ್ಟ್ ಮತ್ತು ಉತ್ಸವ ಸಮಿತಿಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಶ್ರೀ ಅಯ್ಯಪ್ಪ ಸ್ವಾಮಿಯು ಎಲ್ಲರಿಗೂ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಸದಾ ಅನುಗ್ರಹಿಸಲಿ ಎಂದು ಹಾರೈಸಿದರು.

ಬರುವ ಡಿಸೆಂಬರ್ 4ರಿಂದ 6ರವರೆಗೆ ಶಬರಿಗಿರಿ ಶ್ರೀ ಅಯ್ಯಪ್ಪ ಮಂದಿರದ ಪುನಃಪ್ರತಿಷ್ಠಾ ಕಲೋತ್ಸವವು ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಎಡನೀರು ಮಠ ಹಾಗೂ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಾಧೀಶರಾದ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಪೂರ್ಣಾನುಗ್ರಹದೊಂದಿಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಕೋಶಾಧಿಕಾರಿ ಗುರುಪ್ರಸಾದ್ ರೈ, ರಾಜೇಶ್ ಮಾಸ್ಟರ್ ಚಂಬಲ್ತಿಮಾರ್, ಗಿರೀಶ್ ರೈ, ಗುರುಪ್ರಸಾದ್ ಶೆಣೈ ಸೇರಿದಂತೆ ಆರ್‌ಸಿಬಿ ಕ್ಲಬ್ಬಿನ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಪದಾಧಿಕಾರಿಗಳು ಹಾಗೂ ಊರಿನ ಹಲವು ಗಣ್ಯರು ಉಪಸ್ಥಿತರಿದ್ದರು.

ಭಕ್ತಾದಿಗಳ ಅನುಕೂಲಕ್ಕಾಗಿ ಕೈಗೊಂಡ ಈ ಸೇವಾ ಕಾರ್ಯವು ಆರ್‌ಸಿಬಿ ಕ್ಲಬ್ಬಿನ ಸಾಮಾಜಿಕ ಕಳಕಳಿ ಹಾಗೂ ಧಾರ್ಮಿಕ ಸೇವಾ ಮನೋಭಾವಕ್ಕೆ ಸಾಕ್ಷಿಯಾಯಿತು.