ಬಸ್ ತಂಗುದಾಣವೋ ಅಥವಾ ವಿಷಜಂತುಗಳ ಆವಾಸಸ್ಥಾನವೋ? ಕಾಡು ಪೊದೆ ತೆರವಿಗೆ ಕರವೇ ಸ್ವಾಭಿಮಾನಿ ಸೇನೆ ಆಗ್ರಹ

0
11

ಕುಶಾಲನಗರದಿಂದ ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿಯ ಬಸ್ ತಂಗುದಾಣದ ಪಕ್ಕದಲ್ಲೇ ಆಳೆತ್ತರಕ್ಕೆ ಕಾಡು ಪೊದೆಗಳು ಬೆಳೆದಿದ್ದು, ಕೂಡಲೇ ಸ್ವಚ್ಛಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕುಶಾಲನಗರ ತಾಲ್ಲೂಕು ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕುಶಾಲನಗರ ಪುರಸಭೆಯ ಸಹಕಾರದೊಂದಿಗೆ ಇನ್ನರ್ ವ್ಹೀಲ್ ಕ್ಲಬ್ ಕುಶಾಲನಗರ (2022-23) ವತಿಯಿಂದ ಈ ಬಸ್ ತಂಗುದಾಣವನ್ನು ನಿರ್ಮಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆಯಿಲ್ಲದೆ ತಂಗುದಾಣದ ಪಕ್ಕದಲ್ಲಿ ದಟ್ಟವಾಗಿ ಕಾಡು ಬೆಳೆದಿದ್ದು, ತಂಗುದಾಣವೇ ಮುಚ್ಚಿಹೋಗುವ ಹಂತಕ್ಕೆ ತಲುಪಿದೆ. ಒಳಭಾಗದಲ್ಲೂ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ.

ಪ್ರತಿನಿತ್ಯ ನೂರಾರು ಇಂಜಿನಿಯರಿಂಗ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಬಸ್ ನಿಲ್ದಾಣವನ್ನು ಅವಲಂಬಿಸಿದ್ದಾರೆ. ತಂಗುದಾಣದ ಬದಿಯಲ್ಲೇ ದಟ್ಟವಾದ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿರುವುದರಿಂದ, ಒಳಗೆ ಕುಳಿತವರಿಗೆ ರಸ್ತೆಯಲ್ಲಿ ಬಸ್ ಬರುವುದೇ ಕಾಣದಂತಾಗಿದೆ. ಇದರೊಂದಿಗೆ, ಈ ದಟ್ಟ ಪೊದೆಗಳಿಂದ ಹಾವು ಹಾಗೂ ಇತರ ವಿಷಜಂತುಗಳು ತಂಗುದಾಣದೊಳಗೆ ಬರುವ ಭೀತಿಯೂ ಎದುರಾಗಿದ್ದು, ವಿದ್ಯಾರ್ಥಿಗಳು ಆತಂಕದಲ್ಲೇ ಬಸ್‌ಗಾಗಿ ಕಾಯುವಂತಾಗಿದೆ.

ರಾಜ್ಯ ಹೆದ್ದಾರಿಯ ಬದಿಯಲ್ಲೇ ಇರುವ ಬಸ್ ತಂಗುದಾಣದ ಪರಿಸ್ಥಿತಿಯೇ ಹೀಗಾದರೆ, ಇನ್ನು ಗ್ರಾಮೀಣ ಭಾಗಗಳ ಗತಿ ಏನು?” ಎಂದು ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ. ಕುಶಾಲನಗರ ಪುರಸಭೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ತಂಗುದಾಣದ ಸುತ್ತಮುತ್ತ ಹಾಗೂ ಒಳಗಡೆ ಬೆಳೆದಿರುವ ಕಾಡನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಕುಳಿತುಕೊಳ್ಳಲು ಮತ್ತು ಬಸ್ ಬರುವುದನ್ನು ಗಮನಿಸಲು ಅನುಕೂಲ ಮಾಡಿಕೊಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಜಿಲ್ಲಾ ಖಜಾಂಚಿಗಳಾದ ಅಂತೋನಿ ಮತ್ತು ಜಿಲ್ಲಾ ಕಾರ್ಯದರ್ಶಿಗಳಾದ ಮಣಿಕಂಠ ಮತ್ತು ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾದ ಕೆ.ಎಸ್. ಶಿವು ಮತ್ತು ಕಾರ್ಮಿಕ ಘಟಕದ ಅಧ್ಯಕ್ಷರಾದ ಚಂದ್ರು ಮತ್ತು ನಗರ ಘಟಕದ ಅಧ್ಯಕ್ಷರಾದ ಪರಮೇಶ್ ಮತ್ತು ತಾಲೂಕು ಸಂಚಾಲಕರಾದ ವಿ.ಪಿ. ಚಂದ್ರಶೇಖರ್ ಹಾಗೂ ತಾಲೂಕು ಗೌರವಾಧ್ಯಕ್ಷರಾದ ರವೀಂದ್ರ ಉಪಸ್ಥಿತರಿದ್ದರು.