ಮಂಗಳೂರು : ಎಂಆರ್‌ಪಿಎಲ್ ಹಾಗೂ ಒಎನ್‌ಜಿಸಿ ಕೈಗಾರಿಕೆಗಳ ಹಸಿರು ವಲಯ ನಿರ್ಮಾಣಕ್ಕಾಗಿ ಸರ್ಕಾರ ಈಗಾಗಲೇ ಸುಮಾರು 27 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡಿರುವ ಹಿನ್ನೆಲೆಯಲ್ಲಿ, ಕೈಗಾರಿಕಾ ಮಾಲಿನ್ಯದಿಂದ ತೀವ್ರವಾಗಿ ಬಾಧಿತವಾಗಿರುವ ಬಜ್ಪೆ ಶಾಂತಿಗುಡ್ಡೆ ಪ್ರದೇಶವನ್ನೂ ಭೂಸ್ವಾಧೀನ ಪ್ರಕ್ರಿಯೆಗೆ ಸೇರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು 105 ಕುಟುಂಬಗಳ ಪರವಾಗಿ ಸಲ್ಲಿಸಲಾದ ಮನವಿಯಲ್ಲಿ, 2007ರಿಂದಲೇ ಕೈಗಾರಿಕಾ ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸರ್ಕಾರ ಇದುವರೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಆರೋಪಿಸಲಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಲವು ಹಂತಗಳಲ್ಲಿ ನೋಟಿಸ್‌ಗಳು ಬಂದಿದ್ದರೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದ ಭೂಮಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದೆ, ಕುಟುಂಬಗಳು ಅನಿಶ್ಚಿತತೆ ಹಾಗೂ ಸಂಕಷ್ಟದ ನಡುವೆ ಜೀವನ ಸಾಗಿಸುವಂತಾಗಿದೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.
ಮನವಿ ಸ್ವೀಕರಿಸಿದ ತಕ್ಷಣವೇ ಐವನ್ ಡಿ’ಸೋಜಾ ಅವರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು. ಅಲ್ಲದೆ, ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸುವುದರ ಜೊತೆಗೆ, ಬಜ್ಪೆ ಶಾಂತಿಗುಡ್ಡೆ ಪ್ರದೇಶವನ್ನು ಎಂಆರ್‌ಪಿಎಲ್ ಅಥವಾ ಒಎನ್‌ಜಿಸಿ ವತಿಯಿಂದ ಭೂಸ್ವಾಧೀನಪಡಿಸಿ ಸಂತ್ರಸ್ತ ನಿವಾಸಿಗಳಿಗೆ ಶಾಶ್ವತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಹಾಗೂ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವಿಷಯವನ್ನು ಸರ್ಕಾರದ ಗಮನಕ್ಕೂ ತರಲಾಗುವುದು. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿಯೂ ಈ ಸಮಸ್ಯೆಯನ್ನು ಪ್ರಸ್ತಾಪಿಸಿ, ಬಜ್ಪೆ ಶಾಂತಿಗುಡ್ಡೆ ನಿವಾಸಿಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಐವನ್ ಡಿ’ಸೋಜಾ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿರಾಜ್ ಬಜ್ಪೆ, ನಿಸಾರ್ ಕರಾವಳಿ, ಕೃಷ್ಣರಾಜ್, ಮೈಯದ್ದಿ, ಕಿಶೋರ್ ಕುಲಾಲ್, ಜಾಕಿರ್ ಹುಸೇನ್, ಶಿಶಿರ್ ಕುಲಾಲ್, ವಿನೋದ್ ಕುಲಾಲ್, ಹರೀಶ್ ಪೂಜಾರಿ, ಕೌಶಿಕ್ ಜೋಗಿ, ರಫೀಕ್, ರಫೀಕ್ ಶಾಂತಿಗುಡ್ಡೆ, ಹಫೀಜ್, ಜೋರಾ ಕರೀಂ, ಮಮ್ತಾಜ್, ಮಾಲತಿ, ಜಯಂತಿ ಸೇರಿದಂತೆ ಹಲವಾರು ಸಂತ್ರಸ್ತರು ಉಪಸ್ಥಿತರಿದ್ದರು.

