ದಕ್ಷಿಣ ಕನ್ನಡ ಜಿಲ್ಲೆಗೆ ‘ಕುಡ್ಲ’ ಎಂದು ಮರುನಾಮಕರಣಕ್ಕೆ ತುಳುನಾಡ್ ಒಕ್ಕೂಟದ ಮನವಿ

0
21

2014ರ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತಂದ ಸಂಘಟನೆ – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಕೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಕುಡ್ಲ ಜಿಲ್ಲೆ’ ಎಂದು ಬದಲಾಯಿಸಬೇಕು ಹಾಗೂ ಮಂಗಳೂರು ನಗರದ ಹೆಸರನ್ನು ‘ಕುಡ್ಲ’ ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿ ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಪೂರ್ವದ ಗಡಿಯಲ್ಲಿ ಆಕಾಶದ ಎತ್ತರಕ್ಕೆ ಬೆಳೆದು ವಿಶಾಲ ಸಸ್ಯ ರಾಶಿಯೊಂದಿಗೆ ಹರಡಿರುವ ಪಶ್ಚಿಮ ಘಟ್ಟಗಳ ಪಶ್ಚಿಮ ಇಳಿಜಾರಿನಲ್ಲಿ ಆಕಾಶ ಮತ್ತು ಭೂಮಿಯೊಂದಿಗೆ ಬೆಸೆದುಕೊಳ್ಳುವ ಮಳೆ ಮಾರುತಗಳ ಮೋಡಗಳು ಸುರಿಸುವ ಹನಿ ಹನಿ ಮಳೆಯು ತೊರೆಗಳಾಗಿ,ಹಳ್ಳಗಳಾಗಿ ಜಿಲ್ಲೆಯ ಪ್ರತಿ ಇಂಚು ಭೂಮಿಯಲ್ಲಿ ಬೀಳುವ ಮಳೆ ಹನಿಗಳು ಸೇರಿ ನದಿಗಳಾಗಿ ಜಿಲ್ಲೆಯ ಪಶ್ಚಿಮ ಗಡಿಯಲ್ಲಿ ಇರುವ ವಿಶಾಲ ಸಾಗರದೆಡೆಗೆ ದೌಡಾಯಿಸುವ ನೀರು,ಜಿಲ್ಲೆಯ ಭೂಮಿಯ ಸಹಜ ಇಳಿಜಾರಿನಲ್ಲಿ ಸಾಗುವ ಫಲ್ಗುಣಿ ನದಿ,ಸೋಮಾವತಿ ಹೊಳೆ,ನೇತ್ರಾವತಿ ನದಿ,ಮೃತ್ಯುಂಜಯ ಹೊಳೆ,ನೆರಿಯ ಹೊಳೆ,ಶಿಶಿಲ ಹೊಳೆ,ಕೆಂಪು ಹೊಳೆ,ಕುಮಾರಧಾರ ನದಿ,ಜೊತೆಗೆ ಸಾವಿರಾರು ತೊರೆಗಳು ಸೇರಿ ಹರಿಯುವ ಇಡೀ ಜಿಲ್ಲೆಯ ಮಳೆ ನೀರು, ಕಡಲಿನೊಂದಿಗೆ ಸಂಗಮಿಸುವುದು.ನೇತ್ರಾವತಿ ಮತ್ತು ಪಲ್ಗುಣಿ ನದಿಗಳು ಮತ್ತು ಸಮುದ್ರವು ಕೂಡುವ ಪ್ರದೇಶವನ್ನು ನಮ್ಮ ಜನಪದರು ಕುಡ್ಲ ಎಂದು ಕರೆದರು. ಕುಡ್ಲ ಎಂದರೆ ಎರಡು ನದಿಗಳು(ನೇತ್ರಾವತಿ ನದಿ ಮತ್ತು ಫಲ್ಗುಣಿ ನದಿ) ಸಮುದ್ರದ ಜೊತೆಗೆ ಕೂಡುವುದನ್ನು ,ಸೇರುವುದನ್ನು,ಸಂಗಮಿಸುವ ಪ್ರದೇಶವನ್ನು ಕುಡ್ಲ ಎನ್ನುತ್ತಾರೆ.

ನಾಗರೀಕತೆಗಳು ಬೆಳೆದದ್ದು ನದಿಗಳ ತೀರದಲ್ಲಿ,ತುಳುವ ನಾಗರೀಕತೆಯ ಉಗಮದೊಂದಿಗೆ ಉದಯವಾಧ ಹೆಸರು ಕುಡ್ಲ ,ತುಳು ಭಾಷೆಯ ಉಗಮದ ಜೊತೆಗೆ ಬೆಳೆದ ಹೆಸರು ಕುಡ್ಲ . ತುಳುವ ನಾಗರಿಕತೆ ಮತ್ತು ತುಳು ಭಾಷೆಯು ಎಷ್ಟು ಪ್ರಾಚೀನವಾಗಿದೆಯೋ ಅಷ್ಟೇ ಪ್ರಾಚೀನ ಹೆಸರು ಕುಡ್ಲ . ನೇತ್ರಾವತಿ ನದಿ ಮತ್ತು ಪಲ್ಗುಣಿ ನದಿ ಮತ್ತು ಸಮುದ್ರವು ಸೇರುವ ಜಾಗದಲ್ಲಿ ತುಳುವ ನಾಗರೀಕತೆ ಬೆಳೆದಂತೆ ಬೆಳೆದ ಊರು,ಪಟ್ಟಣ,ನಗರ, ಮಹಾನಗರವೇ ಕುಡ್ಲ.ಕುಡ್ಲ ಎನ್ನುವ ಹೆಸರು ಇಡೀ ಜಿಲ್ಲೆಯ ಜೀವಜಲ ಹರಿಯುವ ನರನಾಡಿಯ ಕೇಂದ್ರ ಬಿಂದು. ಕುಡ್ಲ ಎನ್ನುವ ಹೆಸರು ಜೀವ ಜಲದೊಂದಿಗೆ ಇಡೀ ಜಿಲ್ಲೆಯನ್ನು ಪ್ರತಿನಿಧಿಸುತ್ತದೆ.ಇಡೀ ಜಿಲ್ಲೆಯ ಜನರು ಮತ್ತು ಜಿಲ್ಲೆಯ ಸುತ್ತಲಿನ ತುಳು ಪ್ರಾಂತ್ಯದ ಜನರು ಈ ಮಹಾನಗರವನ್ನು ಕುಡ್ಲ ಎಂದೇ ಕರೆಯುತ್ತಾರೆ.ದೇಶ-ವಿದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಜಿಲ್ಲೆಯ ಜನರು ತಮ್ಮನ್ನು ” ಕುಡ್ಲದಾಯೆ “(ಕುಡ್ಲದವನು) ಎಂದೇ ಪರಿಚಯಿಸಿಕೊಳ್ಳುತ್ತಾರೆ.ಹಾಗಾಗಿ ಮಂಗಳೂರು ನಗರದ ಹೆಸರನ್ನು ಕುಡ್ಲ ಎಂದು ಬದಲಾಯಿಸಬೇಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಜಿಲ್ಲಾ ಕೇಂದ್ರವಾದ ಕುಡ್ಲದ ಹೆಸರಲ್ಲಿ ಕುಡ್ಲ ಎಂದು ಬದಲಾಯಿಸಬೇಕು ಎಂದು ವಿನಂತಿಸುತ್ತೇವೆ.

ರಾಜಪ್ರಭುತ್ವ ಇರಲಿ,ಪ್ರಜಾಪ್ರಭುತ್ವ ಇರಲಿ ಪ್ರಜೆಗಳು ಕರೆಯುವುದು ಕುಡ್ಲ ವೆಂದು.ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕರೆಯುವ ಹೆಸರು *ಕುಡ್ಲ ವೇ ಅಂತಿಮ ಹೆಸರಾಗಲಿ ಮಹಾನಗರಕ್ಕೂ, ಜಿಲ್ಲೆಗೂ ಈಗೀರುವ ದಕ್ಷಿಣ ಕನ್ನಡ ಎನ್ನುವ ಹೆಸರು ಪೋರ್ಚುಗೀಸರ ಕಿನಾರದಿಂದ ಬ್ರಿಟಿಷರ ಕೆನಾರವಾಗಿ ಮುಂದೆ ಸೌತ್ ಕೆನಾರವಾಗಿ ಮುಂದೆ ದಕ್ಷಿಣ ಕನ್ನಡವಾಗಿ ಅರ್ಥವಿಲ್ಲದೆ ರೂಪಾಂತರಗೊಂಡಿದೆ.ಈ ಹೆಸರು ಪೋರ್ಚುಗೀಸರ ಆಕ್ರಮಣ,ಬ್ರಿಟಿಷರ ದಾಸ್ಯ,ಪ್ರಾಂತ್ಯದ ಜನರ ಗುಲಾಮಗಿರಿಯನ್ನು ಸೂಚಿಸುತ್ತದೆ.

ತಮಿಳರು ತಮ್ಮ ಅಸ್ಮಿತೆಯ ನಗರವನ್ನು ಮದ್ರಾಸ್ ಹೆಸರಿನಿಂದ ಚೆನ್ನೈ ಹೆಸರಿಗೆ ಬದಲಿಸಿಕೊಂಡರು.ಮರಾಠಿಗರು ತಮ್ಮ ಅಸ್ಮಿತೆಯ ನಗರವನ್ನು ಬಾಂಬೆ ಹೆಸರಿನಿಂದ ಮುಂಬಾಯಿ ಹೆಸರಿಗೆ ಬದಲಿಸಿಕೊಂಡರು ಹಾಗೆಯೇ ತುಳುವರ ಅಸ್ಮಿತೆಯ ನಗರವನ್ನು ಮಂಗಳೂರು ಹೆಸರಿನಿಂದ ಕುಡ್ಲ ಹೆಸರಿಗೆ ಬದಲಾಯಿಸಬೇಕು ಎಂದು ವಿನಂತಿಸುತ್ತೇವೆ.ಹಾಗೆಯೇ ಜಿಲ್ಲೆಗೆ ಜಿಲ್ಲಾ ಕೇಂದ್ರವಾದ ಕುಡ್ಲ ಹೆಸರನ್ನು ಇಡುವಂತೆ ತಮ್ಮಲ್ಲಿ ವಿನಂತಿಸುತ್ತೇವೆ.

‘ಪ್ರಜಾಪ್ರಭುತ್ವದಲ್ಲಿ ಜನರು ಕರೆಯುವ ಹೆಸರೇ ಮಹಾನಗರಕ್ಕೂ ಜಿಲ್ಲೆಗೂ ಅಂತಿಮ ಹೆಸರಾಗಲಿ’ ಎಂಬ ಆಶಯದೊಂದಿಗೆ ಮನವಿ ಸಲ್ಲಿಸಿರುವ ಶೈಲೇಶ್ ಆರ್.ಜೆ. ಅವರು, ಈ ಬೇಡಿಕೆಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳನ್ನು ವಿನಂತಿಸಿದ್ದಾರೆ.