ಉಡುಪಿ : ವಿಶ್ವರಾಮ ಕ್ಷತ್ರಿಯ ಮಹಾಸಂಘ (ರಿ.) ವತಿಯಿಂದ ಅ.3ರಂದು ನಡೆದ ಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ರಚಿಸಲಾಗುತ್ತಿರುವ ಜಿಲ್ಲಾ ಮಟ್ಟದ ಒಕ್ಕೂಟಕ್ಕೆ ‘ರಾಮಕ್ಷತ್ರಿಯ ಸಂಘಗಳ ಜಿಲ್ಲಾ ಒಕ್ಕೂಟ’ ಎಂದು ಹೆಸರಿಡಲು ನಿರ್ಣಯ ಕೈಗೊಳ್ಳಲಾಯಿತು.
ಸಂಘದ ಅಧ್ಯಕ್ಷ ಎಚ್.ಆರ್. ಶಶಿಧರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ರಾಮಕ್ಷತ್ರಿಯ ಸಂಘಗಳ ಅಧ್ಯಕ್ಷರು, ಪ್ರತಿನಿಧಿಗಳು ಹಾಗೂ ಮಹಾಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ರಾಮಕ್ಷತ್ರಿಯ ಸಂಘ, ಉಡುಪಿ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಕಳ ಅಧ್ಯಕ್ಷ ಗುರುಪ್ರಸಾದ್, ಹೆಬ್ರಿ ಅಧ್ಯಕ್ಷ ಶ್ರೀನಿವಾಸ ಹೆಬ್ರಿ, ಬೈಂದೂರು ಅಧ್ಯಕ್ಷ ಗುರುದತ್, ಗಂಗೊಳ್ಳಿ ಸಂಘದ ಪ್ರತಿನಿಧಿ ವಾಸುದೇವ ಸೇರುಗಾರ, ಕೋಡಿ ಅಧ್ಯಕ್ಷ ಶರತ್ ಕಾವೇರಿ, ಕಾಪು ಸಂಘದ ಪ್ರತಿನಿಧಿ ಲಕ್ಷ್ಮೀನಾರಾಯಣ, ಸಾಸ್ತಾನ ಅಧ್ಯಕ್ಷ ಶ್ರೀಧರ ಪಿ.ಎಸ್. ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾಗುತ್ತಿರುವ ಜಿಲ್ಲಾ ಒಕ್ಕೂಟಕ್ಕೆ ‘ರಾಮಕ್ಷತ್ರಿಯ ಕೋಟೆಗಾರ್ ಜಿಲ್ಲಾ ಒಕ್ಕೂಟ’ ಎಂಬ ಹೆಸರು ನೀಡುವ ವಿಚಾರವಾಗಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸಂಘಟನೆಗಳ ಹೆಸರುಗಳನ್ನು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ‘ರಾಮಕ್ಷತ್ರಿಯ’ ಎಂದೇ ನಮೂದಿಸಬೇಕು. ಸಂಘಗಳ ಹೆಸರಿನೊಂದಿಗೆ ‘ಕೋಟೆಗಾರ್’, ‘ಶೇರುಗಾರ್’, ‘ಕೋಟೆಯಾರ್’ ಸೇರಿದಂತೆ ಯಾವುದೇ ಹೆಚ್ಚುವರಿ ನಾಮಪದಗಳನ್ನು ಸೇರಿಸಬಾರದು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ಹಿನ್ನೆಲೆಯಲ್ಲಿ ‘ಕೋಟೆಗಾರ್ ರಾಮಕ್ಷತ್ರಿಯ ಜಿಲ್ಲಾ ಒಕ್ಕೂಟ’ ಎಂಬ ಹೆಸರಿನ ಬದಲಾಗಿ ‘ರಾಮಕ್ಷತ್ರಿಯ ಸಂಘಗಳ ಜಿಲ್ಲಾ ಒಕ್ಕೂಟ’ ಎಂದು ಹೆಸರಿಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಸುರೇಶ್ ಬಟವಾಡಿ, ರವೀಂದ್ರಜಿ ಗಂಗೊಳ್ಳಿ, ರಾಜೇಂದ್ರ ಕೆ. ಹಾಗೂ ಮಂಜುನಾಥ್ ಎನ್. ಕೇಶವ ನಾಯಕ್ ಅವರು ತಮ್ಮ ಅಭಿಪ್ರಾಯ ಮತ್ತು ನಿಲುವುಗಳನ್ನು ಮಂಡಿಸಿದರು. ವಿಶ್ವರಾಮ ಕ್ಷತ್ರಿಯ ಮಹಾಸಂಘದ ಉಪಾಧ್ಯಕ್ಷ ಕೆ. ನಾಗರಾಜ್ ಕಾಮಧೇನು ಅವರು ವಿಷಯಕ್ಕೆ ಸಂಬಂಧಿಸಿದ ಸಾಧಕ-ಬಾಧಕಗಳ ಕುರಿತು ವಿವರಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಸಭೆಯಲ್ಲಿ ವ್ಯಕ್ತವಾದ ವಿವಿಧ ಅಭಿಪ್ರಾಯಗಳನ್ನು ಕ್ರೋಡೀಕರಿಸಿ, ಸಂಘದ ಅಧ್ಯಕ್ಷರ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಬಹುಮತದ ಆಧಾರದ ಮೇಲೆ ನಿರ್ಣಯ ಕೈಗೊಳ್ಳಲಾಗಿದೆ. ಆಡಳಿತ ಮಂಡಳಿಯ ಒಪ್ಪಿಗೆಯ ಮೇರೆಗೆ ರಾಮಕ್ಷತ್ರಿಯ ಸಮಾಜದ ಸಮಸ್ತ ಬಾಂಧವರ ಮಾಹಿತಿಗಾಗಿ ಈ ನಿರ್ಣಯವನ್ನು ಪ್ರಕಟಿಸಲಾಗಿದೆ ಎಂದು ಮಹಾಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಪಿ.ಎಸ್. ತಿಳಿಸಿದ್ದಾರೆ.

