ಸತೀಶ್ ಪೂಜಾರಿ ಕೀಳಂಜೆ ಮನವಿಗೆ ಸ್ಪಂದನೆ : ಉಪ್ಪೂರಿನ ರಸ್ತೆ ಸಮಸ್ಯೆ ಪರಿಹಾರ

0
6

ಉಪ್ಪೂರು : ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿನಿ ಡೈರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮಧ್ಯಭಾಗದಲ್ಲಿ ವಾರಾಹಿ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿಗಾಗಿ ತೋಡಲಾಗಿದ್ದ ದೊಡ್ಡ ಹೊಂಡದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಹಲವು ತಿಂಗಳುಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದೀಗ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ನಿರಂತರ ಮನವಿ ಹಾಗೂ ಪ್ರಯತ್ನದ ಫಲವಾಗಿ ರಸ್ತೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದೆ.

ನಂದಿನಿ ಡೈರಿಗೆ ತೆರಳುವ ಈ ಪ್ರಮುಖ ರಸ್ತೆಯ ಸುತ್ತಮುತ್ತ ಸಾಕಷ್ಟು ವಸತಿ ಪ್ರದೇಶಗಳಿದ್ದು, ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಯ ಮಧ್ಯಭಾಗವನ್ನು ಅಗೆಯಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕವೂ ದೊಡ್ಡ ಕಂದಕದ ರೀತಿಯಲ್ಲಿ ಉಳಿದಿತ್ತು. ಇದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ನಂದಿನಿ ಡೈರಿಗೆ ಹಾಲು ಸಾಗಿಸುವ ವಾಹನಗಳ ಸಂಚಾರಕ್ಕೂ ತೀವ್ರ ತೊಂದರೆಯಾಗಿತ್ತು.

ವಿಶೇಷವಾಗಿ ರಾತ್ರಿ ವೇಳೆ ರಸ್ತೆಯಲ್ಲಿದ್ದ ಹೊಂಡ ಗೋಚರಿಸದೆ ಹಲವು ಅಪಘಾತಗಳು ಸಂಭವಿಸಿದ್ದವು. ಸಮಸ್ಯೆಯಿಂದ ಆತಂಕಗೊಂಡ ಸ್ಥಳೀಯರು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು.

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಸತೀಶ್ ಪೂಜಾರಿ ಕೀಳಂಜೆ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಾರಾಹಿ ನೀರಾವರಿ ಯೋಜನೆಯ ಪೈಪ್‌ಲೈನ್ ಗುತ್ತಿಗೆದಾರರನ್ನು ಸಂಪರ್ಕಿಸಿ ರಸ್ತೆಯ ದುಸ್ಥಿತಿಯ ಕುರಿತು ಗಮನ ಸೆಳೆದರು. ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವಂತೆ ನಿರಂತರವಾಗಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಉಪ್ಪೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ವಾರಾಹಿ ನೀರಾವರಿ ಯೋಜನೆಯ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಮಧ್ಯಭಾಗದಲ್ಲಿದ್ದ ಹೊಂಡವನ್ನು ಮುಚ್ಚುವ ಕಾಮಗಾರಿ ಕೈಗೊಂಡರು. ಜಲ್ಲಿಕಲ್ಲು ಹಾಗೂ ಸಿಮೆಂಟ್ ಮಿಶ್ರಣ ಬಳಸಿ ರಸ್ತೆಯನ್ನು ಸಮತಟ್ಟುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರು ಹಾಗೂ ಉಪ್ಪೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಅಮ್ಮುಂಜಿ ಅವರು ಸ್ಥಳದಲ್ಲಿದ್ದು ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಮುತುವರ್ಜಿ ವಹಿಸಿದರು. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಶಾಶ್ವತವಾಗಿ ಡಾಂಬರೀಕರಣ ಕಾಮಗಾರಿ ನಡೆಸುವ ಭರವಸೆಯನ್ನೂ ನೀಡಲಾಗಿದೆ.

ರಸ್ತೆಯ ಸಮಸ್ಯೆ ಬಗೆಹರಿದಿರುವುದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ನೆಮ್ಮದಿಯಿಂದ ಸಂಚರಿಸುವಂತಾಗಿದೆ. ಸಾರ್ವಜನಿಕರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಶ್ರಮಿಸಿದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ, ಮಾಜಿ ಉಪಾಧ್ಯಕ್ಷ ಸತೀಶ್ ಪೂಜಾರಿ ಅಮ್ಮುಂಜಿ ಮತ್ತು ವಾರಾಹಿ ನೀರಾವರಿ ಯೋಜನೆಯ ಗುತ್ತಿಗೆದಾರರಿಗೆ ಸ್ಥಳೀಯ ಪ್ರಜ್ಞಾವಂತ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತವಾಗಿ ಪರಿಹಾರ ಕಲ್ಪಿಸಿರುವ ಕ್ರಮಕ್ಕೆ ಸ್ಥಳೀಯರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.