
ಉಪ್ಪೂರು: ಕೊಳಲಗಿರಿ ಹೈಸ್ಕೂಲ್ ಆವರಣದಲ್ಲಿ ಪೊದೆ ಹಾಗೂ ಕಸದ ರಾಶಿ ತುಂಬಿಕೊಂಡು ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಅವರ ನಿರಂತರ ಮನವಿ ಹಾಗೂ ದೂರವಾಣಿ ಮೂಲಕ ಮಾಡಿದ ಮನವಿಗೆ ಸ್ಪಂದಿಸಿದ ಶಾಲಾ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ ಹಾಗೂ ಉಪ್ಪೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಶಾಲಾ ಆವರಣದ ಸ್ವಚ್ಛತಾ ಕಾರ್ಯ ಕೈಗೊಂಡರು.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೊಳಲಗಿರಿ ಹೈಸ್ಕೂಲ್‌ನ ಕಾಂಪೌಂಡ್‌ಗೆ ತಾಗಿಕೊಂಡಂತೆ ಶಾಲಾ ಆವರಣದಲ್ಲಿ ಹಲವು ದಿನಗಳಿಂದ ಪೊದೆಗಳು ಬೆಳೆದು, ಕಸದ ರಾಶಿ ಸಂಗ್ರಹವಾಗಿತ್ತು. ಇದರಿಂದ ಕಾಂಪೌಂಡ್ ಸಂಪೂರ್ಣವಾಗಿ ಮುಚ್ಚಿಹೋಗಿ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಆಗಮಿಸುವವರಿಗೆ ತೊಂದರೆಯಾಗಿತ್ತು.
ಸಮಸ್ಯೆಯನ್ನು ಗಮನಿಸಿದ ಸತೀಶ್ ಪೂಜಾರಿ ಕೀಳಂಜೆ ಅವರು ಈ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟಿಸಿ, ಅದರ ಮಾಹಿತಿಯನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ತಲುಪಿಸಿದ್ದರು. ಸಮಸ್ಯೆಯ ಗಂಭೀರತೆಯನ್ನು ಶಾಲಾ ಆಡಳಿತ ಮಂಡಳಿಯ ಗಮನಕ್ಕೂ ತಂದು, ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಶಾಲಾ ಆಡಳಿತ ಮಂಡಳಿ ಉಪ್ಪೂರು ಗ್ರಾಮ ಪಂಚಾಯತ್‌ನ ಸಹಕಾರ ಪಡೆದು ಶಾಲಾ ಕಾಂಪೌಂಡ್ ಸುತ್ತಮುತ್ತಲಿನ ಪೊದೆ ಹಾಗೂ ಕಸದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿತು.
ವಿದ್ಯಾರ್ಥಿಗಳು, ಪೋಷಕರಿಂದ ಮೆಚ್ಚುಗೆ
ಸ್ವಚ್ಛತಾ ಕಾರ್ಯ ನಡೆದಿರುವುದಕ್ಕೆ ಕೊಳಲಗಿರಿ ಹೈಸ್ಕೂಲ್‌ನ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿದ ಸತೀಶ್ ಪೂಜಾರಿ ಕೀಳಂಜೆ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸ್ವಚ್ಛತಾ ಕಾರ್ಯ ನಡೆಸಿದ ಕೊಳಲಗಿರಿ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಉಪ್ಪೂರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸತೀಶ್ ಪೂಜಾರಿ ಕೀಳಂಜೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಇದೇ ರೀತಿ ಸಾರ್ವಜನಿಕ ಆಸ್ತಿಪಾಸ್ತಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಸಂಬಂಧಪಟ್ಟ ಇಲಾಖೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಗಮನಹರಿಸಬೇಕು ಎಂದು ಸತೀಶ್ ಪೂಜಾರಿ ಮನವಿ ಮಾಡಿದ್ದಾರೆ.
ಉಪ್ಪೂರು ಸರಕಾರಿ ಪ್ರೌಢಶಾಲೆಯ ಮುಂಭಾಗವೂ ಸ್ವಚ್ಛ
ಇದೇ ಸಂದರ್ಭದಲ್ಲಿ ಉಪ್ಪೂರು ಸರಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿರುವ ಆವರಣಗೋಡೆಯ ಹೊರಭಾಗವನ್ನೂ ಉಪ್ಪೂರು ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛಗೊಳಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಎಸ್. ಪ್ಯಾಟಿಶೆಟ್ಟರ್ ಅವರ ವಿಶೇಷ ಮುತುವರ್ಜಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಸರಕಾರಿ ಶಾಲೆಯ ಪರಿಸರದ ಬಗ್ಗೆ ಕಾಳಜಿ ವಹಿಸಿ ಸ್ವಚ್ಛತಾ ಕಾರ್ಯ ನಡೆಸಿದ ಉಪ್ಪೂರು ಗ್ರಾಮ ಪಂಚಾಯತ್‌ಗೆ ಶಾಲಾ ಎಸ್‌ಡಿಎಂಸಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.
ಶಾಲಾ ಪರಿಸರ ಸ್ವಚ್ಛವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯಕರ ಹಾಗೂ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗಲು ಸಹಕಾರಿಯಾಗಲಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
