ಪ್ರೇಮ ವೈಫಲ್ಯದ ಸೇಡು ವಂದೇ ಭಾರತ್ ರೈಲಿನ ಮೇಲೆ : ಕಲ್ಲೆಸೆದ 19ರ ಯುವಕ ಅರೆಸ್ಟ್!

0
26

ಪ್ರೇಮ ವೈಫಲ್ಯದಿಂದ ಮನನೊಂದ ಯುವಕನೊಬ್ಬ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದ ಘಟನೆ ಕೇರಳದ ಆಲುವಾದಲ್ಲಿ ನಡೆದಿದ್ದು, ಈ ಸಂಬಂಧ 19 ವರ್ಷದ ಯುವಕನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸುಜಿತ್ ಸುರೇಶ್ (19) ಎಂದು ಗುರುತಿಸಲಾಗಿದೆ. ತಿರುವನಂತಪುರದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಈತ ಮೂರು ಬಾರಿ ಕಲ್ಲು ಎಸೆದಿದ್ದಾನೆ. ಘಟನೆಯಿಂದ ರೈಲಿನ ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ.

ಆರೋಪಿಯ ಪ್ರೇಯಸಿಯ ಮನೆಯು ರೈಲ್ವೆ ಹಳಿಯ ಸಮೀಪದಲ್ಲಿದೆ ಎನ್ನಲಾಗಿದೆ. ಪ್ರೇಯಸಿ ತನ್ನನ್ನು ಬಿಟ್ಟು ಹೋಗಿದ್ದಾಳೆ ಎಂಬ ಕೋಪ ಹಾಗೂ ಪ್ರೇಮ ವೈಫಲ್ಯದ ಬೇಸರದಿಂದ ರೈಲಿನ ಮೇಲೆ ಕಲ್ಲೆಸೆದಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ರೈಲ್ವೆ ಹಳಿಗಳ ಸಮೀಪ ಪದೇಪದೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನ ಚಲನವಲನಗಳನ್ನು ಗಮನಿಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆತನನ್ನು ಗುರುತಿಸಿ ಬಂಧಿಸಿದ್ದಾರೆ.

ಈ ಸಂಬಂಧ ರೈಲ್ವೆ ಪೊಲೀಸರು ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.