ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ : ಇಂದಿನಿಂದ (ನ.16) ಯಾತ್ರೆ ಆರಂಭ

0
6

ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಮಂಡಲ ಪೂಜೆ ಹಾಗೂ ತೀರ್ಥಯಾತ್ರೆಯ ಹಿನ್ನೆಲೆಯಲ್ಲಿ ನವೆಂಬರ್ 16ರ ಸೋಮವಾರ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದೆ. ಇದರೊಂದಿಗೆ ಪ್ರಸಕ್ತ ವರ್ಷದ ಯಾತ್ರಾ ಋತುವಿಗೆ ಸಿದ್ಧತೆಗಳು ಆರಂಭವಾಗಿವೆ.

ನಿರ್ಗಮಿತ ಮುಖ್ಯ ಅರ್ಚಕ ಇ.ಡಿ. ಪ್ರಸಾದ್ ನಂಬೂದರಿ ಅವರು ತಂತ್ರಿ ಕಂಕರ ಬ್ರಹ್ಮದತ್ತನ್ ಅವರ ಉಪಸ್ಥಿತಿಯಲ್ಲಿ ಗರ್ಭಗುಡಿಯ ದೀಪ ಬೆಳಗಿಸಲಿದ್ದಾರೆ. ಬಳಿಕ ಪವಿತ್ರ ಹದಿನೆಂಟು ಮೆಟ್ಟಿಲುಗಳನ್ನು ಇಳಿದು ಬಂದು ಅಗ್ನಿ ಬೆಳಗಿಸಿ, ನೂತನ ಮುಖ್ಯ ಅರ್ಚಕರನ್ನು ಸನ್ನಿಧಾನಕ್ಕೆ ಬರಮಾಡಿಕೊಳ್ಳಲಿದ್ದಾರೆ.

ಸಂಜೆ ಸುಮಾರು 6.30ಕ್ಕೆ ತಂತ್ರಿಗಳು ಶಬರಿಮಲೆಯ ನೂತನ ಮೇಲ್ಶಾಂತಿ ಅರೀಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂತಿರಿ ಅವರ ಪ್ರತಿಷ್ಠಾಪನಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಳಿಕಪ್ಪುರಂ ದೇವಸ್ಥಾನದಲ್ಲೂ ನೂತನ ಮುಖ್ಯ ಅರ್ಚಕರಾಗಿ ಎ. ದಾಮೋದರನ್ ನಂಬೂತಿರಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇಂದು ಬೇರೆ ಯಾವುದೇ ಧಾರ್ಮಿಕ ವಿಧಿವಿಧಾನಗಳು ನಿಗದಿಯಾಗಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 17ರ ಮಂಗಳವಾರ ಬೆಳಗ್ಗೆ 3 ಗಂಟೆಗೆ ನೂತನ ಮುಖ್ಯ ಅರ್ಚಕರು ಶಬರಿಮಲೆ ಮತ್ತು ಮಾಳಿಕಪ್ಪುರಂ ದೇವಸ್ಥಾನಗಳ ಬಾಗಿಲುಗಳನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಿದ್ದು, ಇದರೊಂದಿಗೆ ಮಂಡಲ ಯಾತ್ರಾ ಋತು ಅಧಿಕೃತವಾಗಿ ಆರಂಭವಾಗಲಿದೆ.

ಡಿಸೆಂಬರ್ 27ರಂದು ಮಂಡಲ ಪೂಜೆ ನಡೆಯಲಿದ್ದು, ಪೂಜಾ ಕೈಂಕರ್ಯಗಳ ಬಳಿಕ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನಂತರ ಮಕರವಿಳಕ್ಕು ಯಾತ್ರಾ ಋತುವಿಗಾಗಿ ಡಿಸೆಂಬರ್ 30ರ ಸಂಜೆ 5 ಗಂಟೆಗೆ ಮತ್ತೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಜನವರಿ 14ರಂದು ಮಕರವಿಳಕ್ಕು ಉತ್ಸವ ನಡೆಯಲಿದ್ದು, ಜನವರಿ 19ರವರೆಗೆ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶವಿರುತ್ತದೆ. ಜನವರಿ 20ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ.

ದಿನಕ್ಕೆ 80 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆನ್‌ಲೈನ್ ಬುಕಿಂಗ್ ಕಡ್ಡಾಯವಾಗಿದೆ. ಆದ್ದರಿಂದ ಶಬರಿಮಲೆಗೆ ತೆರಳುವ ಭಕ್ತರು ಮುಂಚಿತವಾಗಿ ಆನ್‌ಲೈನ್ ಮೂಲಕ ದರ್ಶನಕ್ಕೆ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.