
ಮಂಗಳೂರು : ಕೃಷ್ಣಾಪುರದಿಂದ ಬೆಂಗ್ರೆಗೆ ತೆರಳುತ್ತಿದ್ದ ಆಟೋ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡ ಘಟನೆ ಬೆಂಗ್ರೆ ಸೂಪರ್ ಸ್ಟಾರ್ ಗ್ರೌಂಡ್ ಬಳಿ ಸೆಪ್ಟೆಂಬರ್ 9ರಂದು ಸಂಭವಿಸಿದೆ.
ರಿಕ್ಷಾದಲ್ಲಿ ಜೋಹರಾ (68), ಅವರ ಪುತ್ರಿ ಸಪ್ನಾಜ್ (33) ಹಾಗೂ ಮೊಮ್ಮಕ್ಕಳಾದ ಮಹಮ್ಮದ್ ಸಲ್ವಾನ್ (4) ಮತ್ತು ಮಹಮ್ಮದ್ ಶೆಹಾಜಾನ್ (10 ತಿಂಗಳು) ಪ್ರಯಾಣಿಸುತ್ತಿದ್ದರು.
ರಿಕ್ಷಾ ಚಾಲಕ ಅಬ್ದುಲ್ ಅಜೀಜ್ ಅವರ ದುಡುಕುತನ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಿಕ್ಷಾ ಪಲ್ಟಿಯಾದ ಪರಿಣಾಮ ಪ್ರಯಾಣಿಕರು ಹಾಗೂ ಚಾಲಕ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಜೋಹರಾ ಅವರ ಬಲಗೈ ಹೆಬ್ಬೆರಳು ತುಂಡಾಗಿದ್ದು, ಸಪ್ನಾಜ್ ಅವರ ತಲೆಯ ಹಿಂಭಾಗಕ್ಕೆ ಗುದ್ದಿದ ಗಾಯವಾಗಿದೆ. ರಿಕ್ಷಾ ಚಾಲಕ ಅಬ್ದುಲ್ ಅಜೀಜ್ ಅವರ ಬಲಗೈ ಭುಜಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
