ಪತಿ ಕರೆ ಸ್ವೀಕರಿಸದಿದ್ದಕ್ಕೆ ಮನನೊಂದು ವಿವಾಹಿತ ಮಹಿಳೆ ಆತ್ಮಹತ್ಯೆ‌

0
231

ಪತಿ ವೀಡಿಯೊ ಕಾಲ್ ಸ್ವೀಕರಿಸದಿರುವುದರಿಂದ ಮನನೊಂದು 20 ವರ್ಷದ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಮಹಬೂಬಾಬಾದ್‌ನಲ್ಲಿ ವರದಿಯಾಗಿದೆ.

ಮೃತರನ್ನು ವಾರಂಗಲ್ ಜಿಲ್ಲೆಯ ಅಖಿಲಾ (20) ಎಂದು ಗುರುತಿಸಲಾಗಿದೆ. ಅಖಿಲಾ ಅವರು ಎರಡು ವರ್ಷಗಳ ಹಿಂದೆ ಮಹಬೂಬಾಬಾದ್‌ನ ಹುಸೇನ್ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ ಚಿಕ್ಕ ಮಗುವೊಂದು ಇದೆ.

ಸೆಪ್ಟೆಂಬರ್ 2ರಂದು ಅಖಿಲಾ ಅವರು ತಮ್ಮ ತವರು ಮನೆಯಲ್ಲಿದ್ದರು. ಈ ವೇಳೆ ಮಗು ಅಳುತ್ತಿದ್ದ ಹಿನ್ನೆಲೆಯಲ್ಲಿ ಮಗುವನ್ನು ಪತಿಗೆ ತೋರಿಸುವ ಉದ್ದೇಶದಿಂದ ಹುಸೇನ್ ಅವರಿಗೆ ವೀಡಿಯೊ ಕಾಲ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಹುಸೇನ್ ಕರೆ ಸ್ವೀಕರಿಸಿರಲಿಲ್ಲ ಎನ್ನಲಾಗಿದೆ.

ಇದರಿಂದ ಅಖಿಲಾ ಮನನೊಂದಿದ್ದರು ಎಂದು ತಿಳಿದುಬಂದಿದೆ. ಬಳಿಕ ಅವರು ತವರು ಮನೆಯಿಂದ ಮಹಬೂಬಾಬಾದ್‌ನಲ್ಲಿದ್ದ ಅತ್ತೆ-ಮಾವನ ಮನೆಗೆ ತೆರಳಿದ್ದರು. ಅಲ್ಲಿ ಅಖಿಲಾ ವಿಷಕಾರಿ ವಸ್ತುವನ್ನು ಸೇವಿಸಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ.

ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಖಿಲಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿ, ಸಾವಿನ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.