ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಾರಂದೂರು ಗ್ರಾಮದ ಕೆದ್ದು ನರ್ಸರಿ ರಸ್ತೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ಅಭಿವೃದ್ಧಿಪಡಿಸಿ ಮಾದರಿಯಾಗಿದ್ದಾರೆ.
ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ರಸ್ತೆ ಸಮಸ್ಯೆಯನ್ನು ನಿವಾರಿಸಲು ಗ್ರಾಮಸ್ಥರು ಒಂದಾಗಿ ಕೈಜೋಡಿಸಿ ಸ್ವಯಂಪ್ರೇರಿತವಾಗಿ ಶ್ರಮದಾನ ನಡೆಸಿದರು. ಗ್ರಾಮದ ಯುವಕರು, ಹಿರಿಯರು ಹಾಗೂ ಸ್ಥಳೀಯ ನಿವಾಸಿಗಳು ಒಗ್ಗಟ್ಟಿನಿಂದ ರಸ್ತೆ ಕಾಮಗಾರಿಯಲ್ಲಿ ಭಾಗವಹಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಿದ್ಧಪಡಿಸಿದರು.
ಗ್ರಾಮಸ್ಥರ ಈ ಕಾರ್ಯವು “ನಮ್ಮ ಊರು – ನಮ್ಮ ಹೊಣೆ” ಎಂಬ ಮನೋಭಾವವನ್ನು ಪ್ರತಿಬಿಂಬಿಸಿದ್ದು, ಸಮುದಾಯದ ಒಗ್ಗಟ್ಟು ಮತ್ತು ಸಾಮಾಜಿಕ ಕಾಳಜಿಗೆ ಉತ್ತಮ ಉದಾಹರಣೆಯಾಗಿದೆ.
ಸ್ಥಳೀಯರು ಮುಂದಿನ ದಿನಗಳಲ್ಲಿ ರಸ್ತೆ ಶಾಶ್ವತ ಅಭಿವೃದ್ಧಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯವರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಗ್ರಾಮಸ್ಥರ ಶ್ರಮದಾನದ ಈ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಇತರ ಗ್ರಾಮಗಳಿಗೂ ಇದು ಮಾದರಿಯಾಗಿದೆ.

