ಮಂಗಳೂರು : ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ಜ್ಞಾನ, ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ 19ನೇ ವಾರ್ಷಿಕ “ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟ” 28.02.2025 ರಂದು ನಗರದ ಹೋಟೇಲ್ ಮೋತಿ ಮಹಲ್ ಸಭಾಂಗಣದಲ್ಲಿ ಜರಗಿತು. ರೋಟರಿ ಕ್ಲಬ್ ಮೈಸೂರು ವಿಜಯನಗರ ಸಂಸ್ಥೆಯನ್ನು ಪ್ರತಿನಿಧಿಸಿದ ರೋ ಎಚ್.ಎಂ. ಹರೀಶ್ ರವರು ಪ್ರಥಮ ಸ್ಥಾನ ಪಡೆದು ರೋಟರಿ ಪ್ರತಿಷ್ಠಿತ ಪ್ರಶಸ್ತಿ ಪಡೆದರು.
ರೋಟರಿ ಕ್ಲಬ್ ಪುತ್ತೂರು ಪೂರ್ವ ಸಂಸ್ಥೆಯನ್ನು ಪ್ರತಿನಿಧಿಸಿದ ರೋ ಡಾ ಸೂರ್ಯನಾರಾಯಣ ಮತ್ತು ರೋ ಪ್ರಮೀಳಾ ರಾವ್ ತಂಡ ದ್ವಿತೀಯ ಸ್ಥಾನ ಪಡೆದರು. ರೋಟರಿ ಮಂಗಳೂರ ಸೀ ಸೈಡ್ ಸಂಸ್ಥೆಯನ್ನು ಪ್ರತಿನಿಧಿಸಿದ ರೋ ಕೆ. ಮನೋಹರ ಮತ್ತು ರೋ ಅಶೋಕ ಎಂ.ಕೆ. 3ನೇ ಸ್ಥಾನವನ್ನು ಪಡೆಯಿತು. ಈ ಸ್ಪರ್ಧಾ ಕೂಟವು ಅತ್ಯಂತ ಕುತೂಹಲಕಾರಿ ಮತ್ತು ರೋಮಾಂಚನಕಾರಿಯಾಗಿತ್ತು. ಕೇವಲ ರೋಟರಿ ಸಂಸ್ಥೆಯ ಆಡಳಿತ ವಿಷಯ ಹಾಗೂ ಚಟುವಟಿಕೆಗಳ ಬಗ್ಗೆ ಜರಗಿಸಲಾಗಿತ್ತು.
ಮೈಸೂರು ನಗರ ಮೂಲದ ಖ್ಯಾತ ವಾಣಿಜೋದ್ಯಮಿ ಹಾಗೂ ಮಾಜಿ ರೋಟರಿ ಜಿಲ್ಲಾ ಗವರ್ನರ್ ರೋ ಗುರುರಾಜ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾಕೂಟದ ನಿರೂಪಕ ರೋ ಡಾ. ದೇವದಾಸ್ ರೈ ರವರು ರೋಟರಿ ಅಂದೋಲನಕ್ಕೆ ನೀಡಿದ ಕೊಡುಗೆ ಮತ್ತು ಸಲ್ಲಿಸಿದ ಅನುಪಮ ಸೇವೆ ಅಪಾರ ಮತ್ತು ಅಮೂಲ್ಯ ಎಂದು ನುಡಿದು ಅವರ ಸಾಧನೆಯನ್ನು ಶ್ಲಾಘಿಸಿದರು. ಬಳಿಕ ಸ್ಪರ್ಧಾ ಕೂಟ ವಿಜೇತರಿಗೆ ರೋಟರಿ ಆಕರ್ಷಕ ಪ್ರಶಸ್ತಿ, ಪ್ರಮಾಣ ಪತ್ರ ಮತ್ತು ನಗದು ರೂ.3,000 ಬಹುಮಾನವನ್ನು ಹಸ್ತಾಂತರಿಸಿ, ಅಭಿನಂದಿಸಿದರು. ವಲಯ 2ರ ಸಹಾಯಕ ಗವರ್ನರ್ ರೋ ಕೆ.ಎಂ. ಹೆಗ್ಡೆಯವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಸಾಪ್ತಾಹಿಕ ವಾರ್ತಾ ಗೃಹ ಪತ್ರಿಕೆ “ಸೆಂಟೋರ್” ರನ್ನು ಬಿಡುಗಡೆಗೊಳಿಸಿದರು. ಕ್ಲಬ್‌ನ ಅಧ್ಯಕ್ಷರಾದ ರೋ ಬ್ರೆಯನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು, ಮಂಗಳೂರು, ಸುರತ್ಕಲ್, ಪುತ್ತೂರು, ದೇರಳಕಟ್ಟೆ ಜಿಲ್ಲೆಯ 12 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಾರ್ಯದರ್ಶಿ ರೋ ರಾಜೇಶ್ ಸೀತರಾಮ್ ಮಾಸಿಕ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷ ರೋ ರಾಜ್ ಗೋಪಾಲ್ ವಂದಿಸಿದರು.