ತೀರ್ಥಹಳ್ಳಿ : ಹಾಸನ ಜಿಲ್ಲೆ ಅರಕಲಗೋಡು ತಾ. ಅರೆಮಾದನಹಳ್ಳಿಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನಪ್ರಭು ಮಹಾಸ್ವಾಮಿಗಳು ಸುಮಾರು 998 ವರ್ಷಗಳ ಹಿಂದೆ ತಪಸ್ಸನ್ನಾಚರಿಸಿ ಇಡೀ ವಿಶ್ವಕರ್ಮ ಸಮುದಾಯಕ್ಕೆ ಕೊಡುಗೆಯನ್ನು ಕೊಟ್ಟಿರುತ್ತಾರೆ.

ದಿನಾಂಕ 26-2-2026 ರಂದು ಫಾಲ್ಗುಣ ಶುದ್ಧ ದಶಮಿಯಂದು ಪರಮಪೂಜ್ಯ ವಿಶ್ವಕರ್ಮ ಜಗದ್ಗುರುಗಳಾದ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರು ಉತ್ತರಾಧಿಕಾರಿಗೆ ಮಠದ ಸಮೀಪದ ರಾಮನಾಥಪುರ ಅಗಥೇಶ್ವರ ದೇವಸ್ಥಾನದ ಸಮೀಪದಲ್ಲೇ ಹರಿಯುವ ಕಾವೇರಿ ನದಿಯಲ್ಲಿ ಪೂರ್ವಾಶ್ರಮ ತೊರೆಯುವ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನ ಯತಿಗಳಿಗೆ ಸನ್ಯಾಸ ದೀಕ್ಷೆ, ನಂತರದಲ್ಲಿ ಮಠದ ಸ್ವಾಗತ ಗೋಪುರದಿಂದ ಸಹಸ್ರ ಸಂಖ್ಯೆಯಲ್ಲಿ ಸೇರಿರುವ ಶಿಷ್ಯ ವರ್ಗದವರು, ವೈದಿಕ ವಿದ್ವಾಂಸರು, ಅಪಾರ ಜನಸ್ತೋಮದೊಂದಿಗೆ ಮಠಕ್ಕೆ ಮಂಗಳವಾದ್ಯ, ಚಂಡೆವಾದನ, ಭವ್ಯ ಮೆರವಣಿಗೆಯಲ್ಲಿ ಯತಿವರೇಣ್ಯರನ್ನು ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನ ಯತಿಗಳಿಗೆ ಶ್ರೀ ಶ್ರೀ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿಗಳು ಎಂಬ ಯೋಗಪಟ್ಟವನ್ನು ನೀಡಿ 19ನೇಯ ಪೀಠಾಧಿಪತಿಗಳಾಗಿ ದೀಕ್ಷೆಯನ್ನು ನೀಡಲಾಯಿತು.
ಗುರುಮಂದಿರದಲ್ಲಿ ಪೂಜೆ ನೆರವೇರಿಸಿ ಸುಜ್ಞಾನಪ್ರಭುಗಳ ಸನ್ನಿಧಿಯಲ್ಲಿ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಆಶೀರ್ವಚನದಲ್ಲಿ ದೇಶಕ್ಕೆ ಅನ್ನ ನೀಡುವ ರೈತನ ಬೆನ್ನೆಲುಬು ವಿಶ್ವಕರ್ಮ ಸಮುದಾಯವಾಗಿದ್ದು ಅವರಿಗೆ ಎಲ್ಲಾ ರೀತಿಯ ಉಪಕರಣಗಳನ್ನು ಸಿದ್ಧಪಡಿಸಿಕೊಟ್ಟಿದೆ. ಹಿಂದೂ, ಜೈನ, ಬೌದ್ಧ, ಮುಸ್ಲಿಂ, ಕ್ರೈಸ್ತ ಧರ್ಮಿಯರು ಎನ್ನದೆ ಎಲ್ಲರಿಗೂ ದೇವಾಲಯಗಳನ್ನು ನಿರ್ಮಿಸಿಕೊಟ್ಟಿರುವ ವಿಶ್ವಕರ್ಮ ಸಮುದಾಯದ ಸಾಧನೆ ಅವಿಸ್ಮರಣೀಯ, ಬೇಲೂರು, ಹಳೆಬೀಡು, ಅಜಂತ, ಯೆಲ್ಲೋರ ಮಾತ್ರವಲ್ಲದೆ ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚ್, ಶ್ರೀರಂಗಪಟ್ಟಣದ ದರ್ಗ, ಹಾಗೂ ಆಗ್ರಾದ ತಾಜಮಹಲ್ ಸ್ಥಾಪನೆಯ ಹಿಂದೆ ವಿಶ್ವಕರ್ಮ ಸಮುದಾಯದ ಶ್ರಮದಿಂದ ಸಾಧ್ಯವಾಗಿದೆ. ಇಷ್ಟೆಲ್ಲಾ ಶ್ರಮಜೀವಿಗಳಾದ ವಿಶ್ವಕರ್ಮರ ಏಳೀಗೆಗೆ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸಹಾಯಹಸ್ತ ಚಾಚಿಲ್ಲ ಎನ್ನುವುದು ನೋವಿನ ಸಂಗತಿ ಎಂದು ಬೇಸರ ಹೊರಹಾಕಿದರು. ಈ ಹಿಂದೆ ಸರ್ಕಾರದಿಂದ ಬಂದಂತಹ ಅನುದಾನವನ್ನು ಸಭೆಯಲ್ಲಿ ತಿಳಿಸಿದರು.
ಆಗಮಿಸಿದ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿಯವರಿಗೂ, ಸಂಸದರಾದ ಶ್ರೇಯಸ್ ಪಟೇಲ್‌ರವರಿಗೂ, ಮಠದಿಂದ ಮನವಿಯನ್ನು ಸಮರ್ಪಿಸಿ ಸರ್ವ ಗಣ್ಯರನ್ನು ಸನ್ಮಾನಿಸಿ ಆಶೀರ್ವಾದ ಪೂರಕ ಮಂತ್ರಾಕ್ಷತೆಯನ್ನು ನೀಡಲಾಯಿತು.

ಯತಿಶ್ರೇಷ್ಠರಾದ ಶ್ರೀ ಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಅಲಮೇಲು ಸಿಂಧಗಿ, ಶ್ರೀ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಏಕದಂಡಗಿ ಮಠ ಶಹಪುರ, ಶಂಕರಾತ್ಮಾನಂದಸರಸ್ವತಿ ಮಹಾಶ್ವಾಮಿಗಳು ವಡ್ನಾಳ್ ಚನ್ನಗಿರಿ ತಾಲ್ಲೂಕು, ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಬೆಂಗಳೂರು, ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು, ಅದೈತಪೀಠ ಹುಬ್ಬಳ್ಳಿ, ಶ್ರೀ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ವಿರಕ್ತಮಠ ಕೆಸವತ್ತೂರು, ಶ್ರೀ ಶ್ರೀ ಸರ್ವೋತ್ತಮ ಸರಸ್ವತಿ ಸ್ವಾಮೀಜಿ, ಬೆಂಗಳೂರು ಸಾನಿಧ್ಯ ವಹಿಸಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿಯವರು, ಹಾಸನ ಸಂಸದರಾದ ಶ್ರೇಯಸ್ ಪಟೇಲ್‌ರವರು, ಅರಕಲಗೋಡು ಶಾಸಕರಾದ ಎ. ಮಂಜುರವರು, ಡಾ.ಎ.ಟಿ.ರಾಮಸ್ವಾಮಿಯವರು, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಪಿ.ಸುಜ್ಞಾನಮೂರ್ತಿಯವರು, ಮಾಜಿ ಸಚಿವರಾದ ಸಾ.ರಾ.ಮಹೇಶ್, ಡಾ. ಜಿ.ಎಂ. ಉಮೇಶ್ ಕುಮಾರ್ ಸಾನಿಧ್ಯ ವಹಿಸಿದ್ದ ಯತಿವರೇಣ್ಯರು ಆಶೀರ್ವಚನವನ್ನು ಮಾಡಿ ಕೊನೆಯದಾಗಿ ನೂತನ ಯತಿಗಳಾದ ಶ್ರೀ ಶ್ರೀ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ಆಶೀರ್ವಚನದಲ್ಲಿ ನೆರೆದಿರುವ ಜನ ಮಂತ್ರಮುಗ್ಧರಾಗಿ ಆಲಿಸಿದರು.
ಸನಾತನ ಧರ್ಮದ ಶ್ರೇಯೋಭಿವೃದ್ಧಿಗಾಗಿ ವಿಶ್ವಕರ್ಮ ಸಮಾಜದ ಉನ್ನತಿಗಾಗಿ ಪರಮಪೂಜ್ಯರು, ಲಕ್ಷ ಲಕ್ಷ ಮೈಲು ಸಂಚಾರ ಮಾಡಿ ಸಮಾಜವನ್ನು ಸಂಘಟಿಸಿ ವಿಶ್ವಕರ್ಮರು ಎಂಬ ಹೆಮ್ಮೆಯನ್ನು ತಂದುಕೊಟ್ಟಿರುವಂತಹ ಯತಿಶ್ರೇಷ್ಠರಲ್ಲಿ ಅಗ್ರಹಗಣ್ಯರು ಪರಮಪೂಜ್ಯ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿಯವರು. ರಾಮನಾಥಪುರದಲ್ಲಿ ಸಭಾಭವನ ಹಾಗೂ ವೈದಿಕ ಶಾಲೆ, ಮೈಸೂರಿನಲ್ಲಿ ಶಾಖಾ ಮಠ, ಬೆಂಗಳೂರಿನಲ್ಲಿ ಶಾಖಾ ಮಠ, ಕರಾವಳಿ ಭಾಗದ ಉಡುಪಿ ಜಿಲ್ಲೆಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶಾಖಾ ಮಠ ನಿರ್ಮಾಣ ಮಾಡಿ ಅನೇಕ ವರ್ಷಗಳಿಂದ ಚಾತುರ್ಮಾಸ್ಯ ಕಾರ್ಯಕ್ರಮ ಅನೇಕ ಭಾಗಗಳಲ್ಲಿ ಸಾಮೂಹಿಕ ಪಾದಪೂಜೆ ಕಾರ್ಯಕ್ರಮಗಳು, ಅನೇಕ ದೇವಸ್ಥಾನಗಳಿಗೆ ಜೀರ್ಣೋದ್ದಾರ ಕಾರ್ಯಕ್ರಮಕ್ಕೆ ಮಾರ್ಗದರ್ಶನ, ದಿವ್ಯ ಸಾನಿಧ್ಯ ವಹಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಆಧಾರಸ್ತಂಭವಾಗಿದ್ದಾರೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಕರ್ನಾಟಕ ಮಾತ್ರವಲ್ಲದೆ, ದೂರದ ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಭಾಗಗಳಿಂದಲೂ ಕೂಡ ಪೂಜ್ಯರಿಂದ ಅನುಗ್ರಹ ಪಡೆದ ಅಸಂಖ್ಯಾತ ಭಕ್ತರುಗಳು ಆಶೀರ್ವಚನದಿಂದ ಅನೇಕರಿಗೆ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ಜಗದ್ಗುರುಗಳು. ಪೂಜ್ಯರ ತ್ರಿಕಾಲ ಅನುಷ್ಠಾನವನ್ನು ನೋಡಿದ ಅನೇಕ ಯತಿಗಳು ವಾಸ್ತವ್ಯವನ್ನು ಮಾಡಿ ಗುರುಗಳೊಂದಿಗೆ ಸಮಾಲೋಚನೆಯನ್ನು ಮಾಡಿರುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿ. ವಿಶ್ವಕರ್ಮರ ಪಂಚವೇದಗಳು, ಪಂಚಶಿಲ್ಪಗಳು, ಗೋತ್ರಗಳು, ಸೂತ್ರಗಳ ಬಗ್ಗೆ ಮಹಾನ್ ಸಾಧಕರನ್ನು ಬಗ್ಗೆ ಅನಾದಿ ಕಾಲ ಹಾಗೂ ಇಂದಿನ ಆಧುನಿಕತೆಯ ಬಗ್ಗೆ ಶ್ರೀಗಳು ಪ್ರವಚನದಿಂದ ಸಾಮಾನ್ಯ ಜನರು ಪ್ರಭಾವಿತರಾಗಿ ಪರಿವರ್ತನೆ ಸಾಮಾನ್ಯ ಸಾಧನೆಯಲ್ಲಿ. ಶ್ರೀಮಠದಿಂದ ನಡೆಯುತ್ತಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳ ಹಿಂದಿನ ಶಕ್ತಿ ವಿಶ್ವಕರ್ಮ ಜಗದ್ಗುರು ಶ್ರೀ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ಎಂಬುದು ನಮ್ಮೆಲ್ಲರ ಹೆಮ್ಮೆ. ಶಿಷ್ಯ ಜನರಾದ ನಾವು ಅವರ ಮಾರ್ಗದರ್ಶನ, ಅವರ ಉಪದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಅಪಾರ ಅನುಗ್ರಹಕೆ ಪಾತ್ರರಾಗೋಣ.
ಸಭೆಯನ್ನು ಮಠದ ವೈದಿಕ ವಿದ್ವಾಂಸರು ವೇದಘೋಷವನ್ನು ಮಾಡಿದರು. ಮಠದ ಗೌರವ ಸಲಹೆಗಾರರಾದ ದಿವಾಕರ ಸ್ವಾಮಿಯವರು ಸ್ವಾಗತಿಸಿದರು. ವೇ। ಬ್ರಹ್ಮ ದಯಾನಂದ ಶರ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಸನ ವಿಶ್ವಕರ್ಮ ಸಭಾದ ಅಧ್ಯಕ್ಷರಾದ ಹರೀಶ್ ರವರು ವಂದಿಸಿದರು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಗುಡ್ಡಕೊಪ್ಪ ಎನ್.ರಾಘವೇಂದ್ರ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ಎನ್. ರಾಘವೇಂದ್ರ ಆಚಾರ್ಯ ಗುಡೇಕೊಪ್ಪ (ತೀರ್ಥಹಳ್ಳಿ)

