ಉಡುಪಿ : ಕಾರ್ಕಳದಲ್ಲಿ ಸರಣಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಸೋಮನಾಥ ಅಲಿಯಾಸ್ ಸೋಮು ಎಂಬಾತನನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಕಾರ್ಕಳ ತಾಲೂಕು ಕಸಬ ಗ್ರಾಮದ ತೆಳ್ಳಾರು ರಸ್ತೆ ನಿವಾಸಿ ಮುದ್ದು ಎಂಬುವವರ ಪುತ್ರ ಸೋಮನಾಥ (40) ಗಡಿಪಾರಾದ ವ್ಯಕ್ತಿ. ಈತನ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ಸುಮಾರು 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಈಗಾಗಲೇ ಕಾರ್ಕಳ ನಗರ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು.
ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಈತನ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಈತನನ್ನು ಜಿಲ್ಲೆಯಿಂದ ಹೊರಹಾಕಲು ಶಿಫಾರಸು ಮಾಡಿದ್ದರು. ಅದರಂತೆ ಏಪ್ರಿಲ್ 30, 2026 ರಂದು ಅಧಿಕೃತವಾಗಿ ಗಡಿಪಾರು ಆದೇಶ ಜಾರಿಯಾಗಿದೆ.
ಗಡಿಪಾರು ಆದೇಶದನ್ವಯ ಸೋಮನಾಥನನ್ನು ಶಿವಮೊಗ್ಗ ಜಿಲ್ಲೆಯ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಕಳುಹಿಸಲಾಗಿದೆ. ಆದೇಶದ ಅವಧಿಯಲ್ಲಿ ಈತ ಉಡುಪಿ ಜಿಲ್ಲೆಯೊಳಗೆ ಪ್ರವೇಶಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

