ಮಹಿಳೆಯ ಕೊಲೆ ಯತ್ನ ಪ್ರಕರಣ : ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

0
21

ಉಡುಪಿ : ಮನೆಯಲ್ಲಿ ಒಬ್ಬರೇ ಇದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳಿಗೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

18 ಫೆಬ್ರವರಿ 2022 ರಂದು ಮಣಿಪಾಲದ ಟೈಗರ್ ಸರ್ಕಲ್ ಬಳಿ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿರುವ ರಮಾನಾಥ ರೈ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಅವರ ಪತ್ನಿ ಸುಮತಿ ಮಾತ್ರ ಇದ್ದರು. ಸಂಜೆ ಸುಮಾರು 7.15 ಗಂಟೆಗೆ ಸುಮತಿಯವರ ಅಕ್ಕನ ಮಗನಾದ ಬೆಳ್ತಂಗಡಿ ನಿವಾಸಿ ಮಿಥುನ್ ಮತ್ತು ಅವನ ಸ್ನೇಹಿತ ಮಂಚಿಕೋಡಿಯ ನಾಗೇಶ್ ಎಂಬುವವರು ಮನೆಗೆ ಬಂದಿದ್ದರು. ಸಂಬಂಧಿ ಎಂಬ ಕಾರಣಕ್ಕೆ ಸುಮತಿ ಬಾಗಿಲು ತೆರೆದಾಗ, ಅವರಿಬ್ಬರೂ ಸೇರಿ ಕೊಲೆ ಮಾಡುವ ಉದ್ದೇಶದಿಂದ ಸುಮತಿಯವರ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿದ್ದಾರೆ.

ಸುಮತಿಯವರು ಪ್ರಜ್ಞೆ ತಪ್ಪಿದಾಗ, ಆರೋಪಿಗಳು ಅವರನ್ನು ಒಂದು ಚೀಲದಲ್ಲಿ ಹಾಕಿ ಸೂಟ್‌ಕೇಸ್ ಒಳಗೆ ತುಂಬಿಸಿ ಸಾಗಿಸಲು ಯತ್ನಿಸಿದ್ದರು. ಈ ವೇಳೆ ಮನೆಗೆ ಮರಳಿದ ರಮಾನಾಥ ರೈ ಮತ್ತು ಅಕ್ಕಪಕ್ಕದವರು ಸೇರಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸೂಟ್‌ಕೇಸ್ ತೆರೆದಾಗ ಅದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮತಿಯವರನ್ನು ತಕ್ಷಣ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವರ್ ಅವರು ಏಪ್ರಿಲ್ 30, 2026 ರಂದು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.

ಆರೋಪಿಗಳಾದ ಮಿಥುನ್ ಮತ್ತು ನಾಗೇಶ್‌ಗೆ ಭಾ.ದಂ.ಸಂ ಕಲಂ 449 ಮತ್ತು 307 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ 20,000 ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಕಲಂ 325 ರ ಅಡಿಯಲ್ಲಿ 5 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 5,000 ರೂ. ದಂಡ ವಿಧಿಸಲಾಗಿದೆ.

ಪರಿಹಾರ: ವಸೂಲಾದ ದಂಡದ ಮೊತ್ತದಲ್ಲಿ 45,000 ರೂ.ಗಳನ್ನು ಗಾಯಾಳು ಸುಮತಿಯವರಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ.

LEAVE A REPLY

Please enter your comment!
Please enter your name here