ಚೆಂಬೂರು ಕರ್ನಾಟಕ ಸಂಘವನ್ನು ಹಾಗೂ ವಿದ್ಯಾಸಂಸ್ಥೆಯನ್ನು ಆರಂಭಿಸಿದವರೆಲ್ಲರೂ ಸದಾ ಪ್ರಾತಃಸ್ಮರಣೀಯರು – ಚಂದ್ರಕಾಂತ್ ಎಸ್. ನಾಯಕ್
ಮುಂಬಯಿ: ಕಳೆದ 7 ದಶಕಗಳ ಹಿಂದೆ ಕೆಲವೇ ಮಕ್ಕಳ ವಿದ್ಯಾರ್ಜನೆಯೊಂದಿಗೆ ಆರಂಭಗೊಂಡಿದ್ದ ಚೆಂಬೂರು ಕರ್ನಾಟಕ ಸಂಘದ ಹೈಸ್ಕೂಲ್ ಇದೀಗ ಪೂರ್ವ, ಪ್ರಾಥಮಿಕ, ಪ್ರೌಢಶಾಲೆ, ಕಿರಿಯ ಪ್ರಾಥಮಿಕ ಮಹಾವಿದ್ಯಾಲಯ, ಚೆಂಬೂರು ಕರ್ನಾಟಕ ನೈಟ್ ಕಾಲೇಜು ಮತ್ತು ಚೆಂಬೂರು ಕರ್ನಾಟಕ ಕಾಲೇಜ್ ಆಫ್ ಲಾ (ಕಾನೂನು) ಮೊದಲಾದ ಶೈಕ್ಷಣಿಕ ಪ್ರಕ್ರಿಯೆಗಳು ನಡೆಯುತ್ತಿರುವುದು ನಮಗೆ ಹೆಮ್ಮೆ ಯಾಗುತ್ತಿದೆ. ಪ್ರತಿವರ್ಷ ಸಾಹಿತ್ಯ ಸಹವಾಸ ಕಾರ್ಯಕ್ರಮವನ್ನು ಚೆಂಬೂರು ಕರ್ನಾಟಕ ಸಂಘದ ಪ್ರತಿಷ್ಠಿತ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಪ್ರದಾನ, ವೈ.ಜಿ. ಶೆಟ್ಟಿ, ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ, ಅಡ್ವಕೇಟ್ ಸುಬ್ಬಯ ಶೆಟ್ಟಿ ದತ್ತಿ ಪುರಸ್ಕಾರ, ಆರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ ಮೊದಲಾದುವುಗಳನ್ನು ನಾವು ಅರ್ಹ ವ್ಯಕ್ತಿಗಳಿಗೆ ನೀಡುತ್ತಾ ಬಂದಿದ್ದೇವೆ. ಪ್ರಧಾನ ಅತಿಥಿಯಾಗಿ ಹೈಕೋರ್ಟ್‌ನ ನ್ಯಾಯವಾದಿ ಅಶೋಕ್ ಡಿ. ಶೆಟ್ಟಿಯವರು ಆಗಮಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಗುರು ನಾಗೇಶ್ ಕುಮಾರ್, ಪೊಳಲಿ ನಿರ್ದೇಶನದ ಕದಂಬ ಕೌಶಿಕೆ ಯಕ್ಷಗಾನವು ಸೊಗಸಾಗಿತ್ತು. ಚೆಂಬೂರು ಕರ್ನಾಟಕ ಸಂಘವನ್ನು ಹಾಗೂ ವಿದ್ಯಾಸಂಸ್ಥೆಯನ್ನು ಆರಂಭಿಸಿದವರೆಲ್ಲರೂ ಸದಾ ಪ್ರಾತಃಸ್ಮರಣೀಯರು ಎಂದು ಚೆಂಬೂರು ಕರ್ನಾಟಕ ಸಂಘದ ಪ್ರಸಕ್ತ ಅಧ್ಯಕ್ಷ ಚಂದ್ರಕಾಂತ್ ಎಸ್. ನಾಯಕ್ ಅವರು ಅಭಿಪ್ರಾಯಿಸಿದರು.
ಮಾ. 29ರಂದು ಸಂಜೆ ಚೆಂಬೂರು ಕರ್ನಾಟಕ ಹೈಸ್ಕೂಲ್‌ನ ಆವರಣದಲ್ಲಿ ನಡೆದ ಸಾಹಿತ್ಯ ಸಹವಾಸ 2025 ಕಾರ್ಯಕ್ರಮದ ಮಧ್ಯಂತರದಲ್ಲಿ ನಡೆದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಚೆಂಬೂರು ಕರ್ನಾಟಕ ಸಂಘದ ಪ್ರತಿಷ್ಠಿತ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿಯನ್ನು ನಿವೇದಿತಾ ಹಾವನೂರು ಹೊನ್ನಟ್ಟಿ ಅವರಿಗೆ ನೀಡಲಾಯಿತು. ವೈ.ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ವಡಾಲ ಎನ್ ಇಎಸ್ ಶಾಲೆಯ ನಿವೃತ್ತ ಶಿಕ್ಷಕ ರಾಮ ಆಚಾರ್ಯ ಅವರಿಗೆ ನೀಡಲಾಯಿತು.
ಅಡ್ವಕೇಟ್ ಸುಬ್ಬಯ ಶೆಟ್ಟಿ ದತ್ತಿ ಪುರಸ್ಕಾರವನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಉಪನ್ಯಾಸಕಿ ನಿವೃತ್ತ ಪ್ರಾಚಾರ್ಯರಾದ ಡಾ. ಉಮಾರಾವ್ ಅವರಿಗೆ ನೀಡಲಾಯಿತು. ಇದೇ ಸಂದರ್ಭ ಅವರಿಂದ ವಿಶೇಷ ಉಪನ್ಯಾಸ ನಡೆಯಿತು. ಆರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿಯನ್ನು ಲೇಖಕಿ ಅನಿತಾ ಪಿ. ತಾಕೋಡೆ ಅವರಿಗೆ ನೀಡಲಾಯಿತು. ಪುರಸ್ಕಾರ ಸ್ವೀಕೃತರು ಹಾಗೂ ಪ್ರಶಸ್ತಿ ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿದರು. ಸನ್ಮಾನಿತರ ಪರಿಚಯ ಪತ್ರವನ್ನು ವಿಜೇತಾ ಸುವರ್ಣ, ಅಕ್ಷತಾರಾವ್, ಭಾರತಿ ಶೆಟ್ಟಿ, ಅರ್ಚನಾ ಪೂಜಾರಿ ಮೊದಲಾದವರು ವಾಚಿಸಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಪ್ರಭಾಕರ್ ಬಿ. ಬೋಳಾರ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿ ಹೈಕೋರ್ಟಿನ ನ್ಯಾಯವಾದಿ ಅಶೋಕ್ ಡಿ. ಶೆಟ್ಟಿ ಅವರು ಮಾತನಾಡಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಸಂತೋಷವಾಗಿದೆ. ಚೆಂಬೂರು ಕರ್ನಾಟಕ ಸಂಘದೊಂದಿಗೆ ಹಿಂದಿನಿಂದಲೂ ನನಗೆ ನಿಕಟ ಸಂಪರ್ಕವಿದೆ. ಲಾ ಕಾಲೇಜ್ ಆರಂಭಿಸುವಾಗಲೂ ಮಾಜಿ ಅಧ್ಯಕ್ಷರಾಗಿದ್ದ ಅಡ್ವಕೇಟ್ ಸುಧಾಕರ್ ಅವರೊಂದಿಗೆ ನಾನು ಸಂಸ್ಥೆಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಎಲ್ಲರ ಜೀವನ ಉಜ್ವಲವಾಗಲಿ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮೀರಾಭಾಯಂದರ್ ಯಕ್ಷಪ್ರಿಯ ಬಳಗ ಇವರ ಉದಯೋನ್ಮುಖ ಬಾಲ ಕಲಾವಿದರಿಂದ ಯಕ್ಷಗುರು ನಾಗೇಶ್ ಕುಮಾರ್ ಪೊಳಲಿ ನಿರ್ದೇಶನದಲ್ಲಿ ಕದಂಬ ಕೌಶಿಕೆ ಎಂಬ ಯಕ್ಷಗಾನವು ಸಾದರಗೊಂಡು ಸಭಿಕರ ಮನಸೂರಗೊಂಡಿತು. ವೇದಿಕೆಯಲ್ಲಿ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷೆ ಚಂದ್ರಕಾಂತ್ ಎಸ್. ನಾಯಕ್, ಗೌ.ಪ್ರ. ಕಾರ್ಯದರ್ಶಿ ವಿಶ್ವನಾಥ್ ಎಸ್. ಶೇಣವ, ಗೌ.ಪ್ರ, ಕೋಶಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಪ್ರಭಾಕರ್ ಬಿ. ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.
ಚೆಂಬೂರು ಕರ್ನಾಟಕ ಸಂಘದ ಸಂಚಾಲಿತ ಚೆಂಬೂರು ಕರ್ನಾಟಕ ಹೈಸ್ಕೂಲಿನ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು, ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ಪ್ರಾಧ್ಯಾಪಿಕೆ ತ್ಯಾಮಲ ಉಚ್ಚಿಲ್ ನಿರೂಪಿಸಿದರು. ಗೌ.ಪ್ರ. ಕಾರ್ಯದರ್ಶಿ ವಿಶ್ವನಾಥ್ ಎಸ್. ಶೇಣವ ವಂದನಾರ್ಪಣೆಗೈದರು. ತದನಂತರ ನಾಗೇಶ್ ಕುಮಾರ್ ಪೊಳಲಿ ನಿರ್ದೇಶನದ ಕದಂಬ ಕೌಶಿಕೆ ಯಕ್ಷಗಾನವು ಸಾದರಗೊಂಡು ಸಹಕರ ಮನಸೂರೆಗೊಂಡಿತು. ಕೊನೆಯಲ್ಲಿ ಪ್ರೀತಿಭೋಜನ ನಡೆಯಿತು.