ಉಡುಪಿ : ನಗರಸಭಾ ವ್ಯಾಪ್ತಿಯ ಸಂತೆಕಟ್ಟೆ ಸರ್ವಿಸ್ ರಸ್ತೆಯು ಸಂಪೂರ್ಣ ಕೆಸರಿನಿಂದ ಕೂಡಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸಂತೆಕಟ್ಟೆ ಜಂಕ್ಷನ್‌ನಿಂದ ಲಕ್ಷ್ಮಿನಗರಕ್ಕೆ ತಿರುಗುವ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಯ ಬದಿಗಳಲ್ಲಿ ಕೆಸರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಮಳೆ ಬಂದಾಗ ರಸ್ತೆಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ದ್ವಿಚಕ್ರ ವಾಹನ ಸವಾರರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಅಪಾಯದ ನಡುವೆ ಸಂಚರಿಸುವಂತಾಗಿದೆ.

ಸಂತೆಕಟ್ಟೆಯಿಂದ ಮಲ್ಪೆ ಭಾಗಕ್ಕೆ ತೆರಳುವ ಎಡಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನಿರ್ಮಿಸಲಾದ ಸರ್ವಿಸ್ ರಸ್ತೆಯಲ್ಲಿ ಕಾಮಗಾರಿ ಅರ್ಧಂಬರ್ಧವಾಗಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯ ಕೆಲವೆಡೆ ಇಕ್ಕಟ್ಟಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನಗಳು ಪರಸ್ಪರ ದಾಟಲು ಕಷ್ಟವಾಗುತ್ತಿದೆ.
ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ದುಸ್ಥಿತಿಯಿಂದಾಗಿ ವಾಹನಗಳ ಸಂಚಾರ ನಿಧಾನಗೊಳ್ಳುವುದರ ಜತೆಗೆ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕೆಸರಿನಿಂದ ಕೂಡಿದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಜಾರಿಬಿದ್ದು ಅಪಘಾತ ಸಂಭವಿಸುವ ಘಟನೆಗಳೂ ನಡೆಯುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವಿಶೇಷವಾಗಿ ಮಹಿಳಾ ದ್ವಿಚಕ್ರ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ. ರಸ್ತೆ ಬದಿಗೆ ಇಳಿದು ವಾಹನ ಚಲಾಯಿಸಲು ಸಾಧ್ಯವಾಗದ ಸ್ಥಿತಿ ಇರುವುದರಿಂದ, ಡಾಮರೀಕರಣಗೊಂಡ ಇಕ್ಕಟ್ಟಾದ ರಸ್ತೆಯಲ್ಲೇ ವಾಹನಗಳು ಸಂಚರಿಸುವಂತಾಗಿದೆ.
ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಸಂಪೂರ್ಣಗೊಳಿಸಿ, ರಸ್ತೆಗೆ ಸಮರ್ಪಕವಾಗಿ ಡಾಮರೀಕರಣ ಮಾಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಅಪಘಾತ ಹಾಗೂ ಟ್ರಾಫಿಕ್ ಜಾಮ್‌ಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಾರ್ವಜನಿಕರು, ವಾಹನ ಸವಾರರು ಹಾಗೂ ಮಹಿಳೆಯರ ಪರವಾಗಿ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸರ್ವಿಸ್ ರಸ್ತೆಯನ್ನು ಸಂಪೂರ್ಣ ಡಾಮರೀಕರಣಗೊಳಿಸುವಂತೆ ಒತ್ತಾಯಿಸಿದ್ದಾರೆ.

