ಉಡುಪಿ : ಕೃಷ್ಣ ಮಠದ ವಾರ್ಷಿಕ ಜಾತ್ರೆ ಸಪ್ತೋತ್ಸವ ಗುರುವಾರ ಬೆಳಗ್ಗೆ ಹಗಲು ರಥೋತ್ಸವ ಹಾಗೂ ಅವಭೃತೋತ್ಸವದೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿ ಪೂಜಿಸಿ, ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಭಕ್ಷ್ಯ , ಫಲವಸ್ತು, ತೆಂಗಿನಕಾಯಿಗಳನ್ನು ಸಮರ್ಪಿಸಿ ಮಂಗಳಾರತಿ ಬೆಳಗಿದರು.
ನಂತರ ಭಕ್ತರಿಗೆ ಪ್ರಸಾದಗಳನ್ನು ವಿತರಿಸಲಾಯಿತು. ಪರ್ಯಾಯ ಶ್ರೀಗಳ ಸಹಿತ ವಿವಿಧ ಭಕ್ತರು ಬ್ರಹ್ಮರಥವನ್ನು ಎಳೆಯುವ ಮೂಲಕ ಹಗಲುತೇರಿನ ಮೆರವಣಿಗೆಗೆ (ಚೂಣೋರ್ತ್ಸವ) ಚಾಲನೆ ನೀಡಿದರು. ಅನೇಕ ಮಂದಿ ಭಕ್ತರು ರಥಬೀದಿಯಲ್ಲಿ ಉರುಳು ಸೇವೆ ನಡೆಸಿದರು.
ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟಾವಧಾನ ಸೇವೆ, ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ, ಸೇವಾಕರ್ತೃಗಳಿಗೆ ಪ್ರಸಾದ ವಿತರಣೆ ನಡೆಯಿತು. ನಂತರ ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣದೇವರ ಅವಭೃತಥೋತ್ಸವ ಜರಗಿತು. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

