ನೆಲಮಂಗಲ: ಬಸ್ ಚಾಲಕನ ನಿರ್ಲಕ್ಷದಿಂದ ಶಾಲಾ ವಾಹನ ಪಲ್ಟಿಯಾದ ಪರಿಣಾಮ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಬೆಂಗಳೂರು ಹೊರವಲಯದ ಮಾದಾವರ ನೈಸ್ ರಸ್ತೆಯ ಪಿಕಾಕ್ ಬಡಾವಣೆಯಲ್ಲಿ ನಡೆದಿದೆ.
ಘಟನೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ಡೆಲ್ಲಿ ಪಬ್ಲಿಕ್ ಶಾಲೆಯ ವಾಹನ ಪಲ್ಟಿಯಾಗಿದೆ. 30ಕ್ಕೂ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆತರಲಾಗುತ್ತಿದ್ದು, ಚಾಲಕರ ನಡುವೆ ಪೈಪೋಟಿ ಉಂಟಾಗಿ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ ಬಸ್ ಪಲ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಶಾಲಾ ಪುಟಾಣಿ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದು, ಬಸ್ ಪಲ್ಟಿಯಾದ ಹಿನ್ನೆಲೆ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಕ್ಕಳ ಪೋಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.