ಉಡುಪಿ : ದೈವಾರಾಧನಾ ಕ್ಷೇತ್ರದಲ್ಲಿ ದಶಕಗಳ ಕಾಲ ಅಪಾರ ನಿಷ್ಠೆ, ಭಕ್ತಿ ಹಾಗೂ ಸಮರ್ಪಣಾ ಮನೋಭಾವದಿಂದ ದೈವದ ಚಾಕ್ರಿ ನಿರ್ವಹಿಸಿದ್ದ ಹಿರಿಯ ದೈವಪಾತ್ರಿ ಸೋಮು ಪಾಣ್ಣರ ಅವರು ಅಸ್ವಸ್ಥತೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ತುಳುನಾಡಿನ ದೈವ ಸಂಸ್ಕೃತಿ ಮತ್ತು ಆರಾಧನಾ ಪರಂಪರೆಯೊಂದಿಗೆ ಆಳವಾಗಿ ಬೆಸೆದುಕೊಂಡಿದ್ದ ಸೋಮು ಪಾಣ್ಣರ ಅವರು ತಮ್ಮ ಬದುಕನ್ನೇ ದೈವ ಸೇವೆಗೆ ಸಮರ್ಪಿಸಿಕೊಂಡಿದ್ದರು. ದೈವಗಳ ನೇಮ, ಕೋಲ ಹಾಗೂ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಭಕ್ತರ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.
“ದೈವೇ ನನ್ನ ಉಸಿರು” ಎಂಬ ಭಾವನೆಯೊಂದಿಗೆ ಜೀವನ ಸಾಗಿಸಿದ್ದ ಸೋಮು ಪಾಣ್ಣರ ಅವರು ದೈವಾರಾಧನೆಯ ಮೂಲಕ ಸಾವಿರಾರು ಭಕ್ತರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು. ಅವರ ಅಗಲಿಕೆಯಿಂದ ತುಳುನಾಡಿನ ದೈವಾರಾಧನಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಭಕ್ತರು ಹಾಗೂ ದೈವ ಸೇವಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ದೈವಾರಾಧಕರ ಒಕ್ಕೂಟ ಕೇಂದ್ರೀಯ (ರಿ) ಉಡುಪಿ ಜಿಲ್ಲೆ, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ನಮ್ಮ ಉಡುಪಿ ಟಿವಿಯ ಪ್ರವರ್ತಕರು ಮತ್ತು ಸಿಬ್ಬಂದಿ ವರ್ಗ, ಕುಟುಂಬಸ್ಥರು ಹಾಗೂ ಬನ್ನಂಜೆ ವರ್ತೆ ಕಾಳಿ-ಕಲ್ಕುಡ ದೈವಸ್ಥಾನದ ಭಕ್ತರು ಸೋಮು ಪಾಣ್ಣರ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

