ಮಾನವ ಸೇವೆಯೇ ಮಾಧವ ಸೇವೆ: ಶಿವಾಯ ಫೌಂಡೇಶನ್‌ನಿಂದ ಶೈಕ್ಷಣಿಕ ನೆರವು

0
78

ಪಡುಬಿದ್ರಿ : ಮುಂಬಯಿಯಲ್ಲಿ ಸಮಾನ ಮನಸ್ಕ ಯುವಕರು ಸ್ಥಾಪಿಸಿರುವ ಶಿವಾಯ ಫೌಂಡೇಶನ್ ರಾಷ್ಟ್ರೀಯತೆ ಹಾಗೂ ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಫೌಂಡೇಶನ್‌ನ ಮಾನವ ಸೇವೆ ಮಾಧವ ಸೇವೆಯಾಗಲಿ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶಿಸಿದರು.

ರವಿವಾರ ಪಡುಬಿದ್ರಿಯ ಬಂಟರ ಸಂಘದಲ್ಲಿ ಮುಂಬಯಿಯ ಶಿವಾಯ ಫೌಂಡೇಶನ್ ವತಿಯಿಂದ ಆಯೋಜಿಸಲಾದ 8ನೇ ವರ್ಷದ ‘ವಿದ್ಯಾ ಪ್ರೇರಣಾ–2026’ ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ 142 ಫಲಾನುಭವಿಗಳಿಗೆ ಒಟ್ಟು ₹7.5 ಲಕ್ಷ ಶೈಕ್ಷಣಿಕ ನೆರವು ವಿತರಿಸಲಾಯಿತು. ಡಾ. ವೈ.ಎನ್. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಿವಾಯ ಫೌಂಡೇಶನ್ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಈಶ್ವರ್ ಶೆಟ್ಟಿ, ಹರಿಪ್ರಸಾದ್ ರೈ, ಮಟ್ಟಾರು ರತ್ನಾಕರ ಶೆಟ್ಟಿ, ನವೀನ್ ಎನ್. ಶೆಟ್ಟಿ, ಅನಿಲ್ ಶೆಟ್ಟಿ, ವಿದ್ಯಾಧರ ಶೆಟ್ಟಿ, ಬಾಲಚಂದ್ರ ಶೆಟ್ಟಿ ಪುಚೊಟ್ಟುಬೀಡು, ಪ್ರೇಮ್‌ನಾಥ್ ಶೆಟ್ಟಿ, ಸದಾನಂದ ಪೂಜಾರಿ ಮುಂಬಯಿ, ರಾಯೇಶ್ವರ್ ಪೈ, ಗಾಯತ್ರಿ ಪ್ರಭು ಪಲಿಮಾರು ಮತ್ತಿತರರು ಉಪಸ್ಥಿತರಿದ್ದರು.

ಉದ್ಯಮಿ ಹಾಗೂ ಚಿತ್ರನಟ ಸಂತೋಷ್ ಕುಮಾರ್ ಶೆಟ್ಟಿ ಪಡುಬಿದ್ರಿ ಮತ್ತು ನಿವೃತ್ತ ಶಿಕ್ಷಣಾಧಿಕಾರಿ, ನಾಗರಿಕ ಸೇವಾ ಸಂಸ್ಥೆಯ ಬಿ. ವಿಟ್ಠಲ ಶೆಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.

ಪ್ರಶಾಂತ್ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ಡಾ. ದೇವಿಪ್ರಸಾದ್ ಬೆಳ್ಳಿಬೆಟ್ಟು ಹಾಗೂ ಡಾ. ಸ್ವರ್ಣಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಿವಾಯ ಫೌಂಡೇಶನ್ ಗೌರವ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಪಂಜ ವಂದಿಸಿದರು.