
ಮಕ್ಕಳಿಗೆ ಶುಭ ಹಾರೈಕೆ, ರೇಷನ್ ಕಿಟ್ ವಿತರಣೆ ಹಾಗೂ ಸಹಾಯಧನ ಹಸ್ತಾಂತರ
ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯ ಸ್ಮರಣಾರ್ಥ ಹಾಗೂ ಜನಕಲ್ಯಾಣದ ಉದ್ದೇಶದಿಂದ ದೇಶ ಮತ್ತು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ವಿಶೇಷ ಜನಜಾಗೃತಿ ಮತ್ತು ಸೇವಾ ಕಾರ್ಯಕ್ರಮದ ಅಂಗವಾಗಿ, ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಸೇವಾ ಸಂಕಲ್ಪ ಅಭಿಯಾನ-2026ರ ಕಾರ್ಯಕ್ರಮ ನಡೆಯಿತು.
ಈ ಪ್ರಯುಕ್ತ ಕಣ್ಣೂರಿನ ಕೊಡೆಕಲ್ಲಿನಲ್ಲಿರುವ ವಾತ್ಸಲ್ಯ ಧಾಮ ಚಾರಿಟೇಬಲ್ ಟ್ರಸ್ಟ್ನ ಸಂವೇದನಾ ಮಕ್ಕಳ ಮನೆಗೆ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿ ಮಕ್ಕಳೊಂದಿಗೆ ಸಮಯ ಕಳೆದು, ಸೇವಾ ಚಟುವಟಿಕೆಗಳನ್ನು ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಶ್ರೀಧರ ಶೆಟ್ಟಿ ಮಾತನಾಡಿ, ವಿಕಸಿತ ಭಾರತ-2047ರ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ಕೈಗೊಂಡಿರುವ ಕಾರ್ಯಗಳು ಹಾಗೂ ಸಾರ್ವಜನಿಕರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾನೂನು ಪ್ರಕೋಷ್ಠದ ಸಹ ಸಂಚಾಲಕ ಪ್ರಮೋದ್ ಪೂಜಾರಿ ಕೆರ್ವಾಸೆ ಅವರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮಾರ್ಗದರ್ಶನದ ಮಾತುಗಳನ್ನು ಹಂಚಿಕೊಂಡು, ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಸದಸ್ಯ ಶ್ರೀಧರ ಸುವರ್ಣ ಅವರು ಪಕ್ಷದ ಬೆಳವಣಿಗೆ ಹಾಗೂ ನಡೆದುಬಂದ ಹಾದಿಯ ಕುರಿತು ವಿವರಿಸಿದರು.
ಹಿರಿಯ ವಕೀಲ ಎನ್. ನರಸಿಂಹ ಹೆಗ್ಡೆ ಅವರು ಮಕ್ಕಳಿಗೆ ರೇಷನ್ ಕಿಟ್ಗಳನ್ನು ವಿತರಿಸಿ ಶುಭ ಹಾರೈಸಿದರು. ಮತ್ತೋರ್ವ ಸದಸ್ಯ ವೇಣು ಕುಮಾರ್ ಅವರು ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಸಂಸ್ಥೆಗೆ ಸಹಾಯಧನವನ್ನು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡುವುದರ ಜೊತೆಗೆ, ಕಾನೂನು ಸಂಬಂಧಿತ ವಿಚಾರಗಳಲ್ಲಿ ಅಗತ್ಯ ನೆರವು ಒದಗಿಸಲು ಟ್ರಸ್ಟ್ನೊಂದಿಗೆ ನಿರಂತರ ಸಂಪರ್ಕ ಹೊಂದಿರುವುದಾಗಿ ಕಾನೂನು ಪ್ರಕೋಷ್ಠದ ಪರವಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸದಸ್ಯರಾದ ಸಂದೀಪ್ ವಳಲಂಬೆ, ಕುಮಾರಿ ಅಕ್ಷತಾ, ಮಕ್ಕಳ ಮನೆಯ ಸೇವಾಕರ್ತೆ ಶ್ರೀಮತಿ ಜಯಲತಾ ಅಮೀನ್ ಹಾಗೂ ಇತರರು ಉಪಸ್ಥಿತರಿದ್ದರು.
ಸೇವಾ ಸಂಕಲ್ಪ ಅಭಿಯಾನದ ಮೂಲಕ ಮಕ್ಕಳಿಗೆ ನೆರವು ನೀಡುವುದರ ಜೊತೆಗೆ, ಅವರ ಭವಿಷ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಸಾಮಾಜಿಕ ಸೇವೆ ಮತ್ತು ಜನಜಾಗೃತಿಯ ಸಂದೇಶವನ್ನು ಸಾರಲಾಯಿತು.
