ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲ್ಲೂಕು ಘಟಕದ ವತಿಯಿಂದ ಕಬ್ಬಿನಾಲೆಯ ‘ಅನುಗ್ರಹ’ ನಿವಾಸ ದಲ್ಲಿ ದಿನಾಂಕ 1-11- 2026ರಂದು ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಧಕರಾದ ಕೆ. ಗೋಪಾಲಕೃಷ್ಣ ರಾವ್ ಅವರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಸೀತಾರಾಮ ಹೆಬ್ಬಾರ್, ಸಾಹಿತಿಗಳಾದ ಶ್ರೀಮುದ್ರಾಡಿ ಉಪಸ್ಥಿತರಿದ್ದರು
ಪ್ರಪ್ಪಾ ವತಿ ಹೆಬ್ರಿ (ಪದಾಧಿಕಾರಿ) ಪ್ರಾರ್ಥಿಸಿದರು. ಮಹೇಶ ಹೈಕಾಡಿ (ಪದಾಧಿಕಾರಿ) ಪ್ರಾಸ್ತಾವಿಕವಾಗಿ ಎಲ್ಲರನ್ನು ಸ್ವಾಗತಿಸಿದರು. ಮಂಜುನಾಥ ಕೆ ಶಿವಪುರ (ಗೌರವ ಕಾರ್ಯದರ್ಶಿ) ಕಾರ್ಯಕ್ರಮವನ್ನು ನಿರೂಪಿಸಿದರು. ವೀಣಾ ಆರ್ ಭಟ್ (ಪದಾಧಿಕಾರಿ) ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಬಾಲಚಂದ್ರ ಹೆಬ್ಬಾರ್ (ಪದಾಧಿಕಾರಿ) ವಂದನಾರ್ಪಣೆಗೈದರು.
ಗಾಯಕರಾದ ನಿತ್ಯಾನಂದ ಭಟ್ ಮತ್ತು ಸುಬ್ರಹ್ಮಣ್ಯ ಅವರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಸೀತಾರಾಮ ಹೆಬ್ಬಾರ್ ಅವರು ಮಾತನಾಡಿ, “ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಉತ್ತಮ ಸೇವೆ ಮಾಡುತ್ತಿರುವ ಗೋಪಾಲಕೃಷ್ಣರು ಹಿರಿಯ ಮತ್ತು ಕಿರಿಯ ಕಲಾವಿದರ ಕೊಂಡಿಯಾಗಿದ್ದಾರೆ, ಇಂತಹ ಹಿರಿಯ ವ್ಯಕ್ತಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಅತ್ಯುತ್ತಮ ನಡೆ ಎಂದು ಪ್ರಶಂಸಿಸಿದರು.
ಮತ್ತೊಬ್ಬ ಅತಿಥಿಗಳಾದ ಸಾಹಿತಿಗಳಾದ ಶ್ರೀಮುದ್ರಾಡಿ ಅವರು ಮಾತನಾಡಿ, “ಕನ್ನಡ ನಾಡಿನ ಜನಪದರು ವಿಜಯ ಹೇಳಿದಂತೆ ಕುರಿತೋದೆಯುಂ ಕಾವ್ಯ ಪ್ರಯೋಗ ಪರಿಣತಿ ಮತಿಗಳು, ಸಾಹಿತ್ಯ ಸಂಸ್ಕೃತಿ ಕಲಾ ಸೇವಕರು ಎಂಬುದಕ್ಕೆ ಕೆ. ಗೋಪಾಲಕೃಷ್ಣ ರಾವ್ ಉತ್ತಮ ಉದಾಹರಣೆಯಾಗಿದ್ದಾರೆ” ಎಂದು ಬಣ್ಣಿಸಿದರು.
ಈ ಸಮಾರಂಭದಲ್ಲಿ ಊರ ನಾಗರಿಕರು, ಕ.ಸಾ.ಪ ಪದಾಧಿಕಾರಿಗಳು ಹಾಗೂ ಗೋಪಾಲಕೃಷ್ಣ ರಾವ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

